ಅರಸೀಕೆರೆ: ನಗರದ ಗ್ರಾಮದೇವತೆಗಳಾದ ಕರಿಯಮ್ಮ ಮತ್ತು ಮಲ್ಲಿಗೆಮ್ಮನವರ 56ನೇ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳಿಂದ ಮಡಿಲು ಅಕ್ಕಿ ಸ್ವೀಕಾರಕ್ಕೆ ಭಾನುವಾರದಿಂದ ಚಾಲನೆ ನೀಡಲಾಯಿತು.
ಪ್ರತಿ ವರ್ಷವೂ ಜಾತ್ರಾ ಮಹೋತ್ಸವದಲ್ಲಿ ಶ್ರೀದೇವಿಯವರು ಪ್ರತಿ ಮನೆ ಮನೆಗೆ ತೆರಳಿ ಆಸೀನರಾಗುವುದರ ಮೂಲಕ ಮಡಿಲು ಅಕ್ಕಿಯನ್ನು ಪಡೆಯುವುದು ಸಾಂಪ್ರದಾಯಿಕ ವಾಡಿಕೆ. ಈ ವರ್ಷವೂ ನಗರದ ಹಲವಾರು ಬಡಾವಣೆಗಳ ಭಕ್ತರ ಮನೆಗಳಿಗೆ ತೆರಳಿದ ಕರಿಯಮ್ಮ ದೇವಿ ಮೂರ್ತಿಯನ್ನು ಸಡಗರ ಸಂಭ್ರಮದಿಂದ ಮನೆಯೊಳಗೆ ಬರಮಾಡಿಕೊಂಡ ಭಕ್ತಾಧಿಗಳು ಮರದ ಬಾಗಿನದಲ್ಲಿ ಮಂಗಳದ್ರವ್ಯಗಳೊಂದಿಗೆ, ಅಕ್ಕಿ, ಅರಸಿನ, ಕುಂಕುಮದೊಂದಿಗೆ ಕಾಣಿಕೆ ಅರ್ಪಿಸಿ ಪ್ರಾರ್ಥಿಸಿ ಪುನೀತರಾದರು.
ಗ್ರಾಮ ದೇವತೆಗಳೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ, ಪ್ರಾತಃ ಕಾಲದಲ್ಲಿಯೇ ಎದ್ದು, ಮನೆ ಮುಂದೆ ಸಾರಿಸಿ, ತಳಿರು ತೋರಣಗಳಿಂದ ಶೃಂಗರಿಸಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ಅಮ್ಮನವರನ್ನು ಬರಮಾಡಿಕೊಳ್ಳುವುದೇ ಒಂದು ಉತ್ಸವ.
ಗ್ರಾಮೀಣ ಸೋಗಡಿನ ವಾದ್ಯ ಮೇಳದೊಂದಿಗೆ ವಿವಿಧ ಹೂವುಗಳಿಂದ ಶೃಂಗರಿಸಿಕೊಂಡು ಸಾಗುವ ಅಮ್ಮನವರು ಭಕ್ತರ ಮನೆಯಲ್ಲಿ ಕೆಲಕಾಲ ಆಸೀನರಾಗುತ್ತಾರೆ. ಇಷ್ಟಾನುಸಾರ ಪೂಜೆ ಕೈಂಕರ್ಯಗಳನ್ನು ಅರ್ಪಿಸುವ ಭಕ್ತರು ಪ್ರಸಾದ ವಿತರಿಸಿ ಪುನೀತರಾಗುತ್ತಾರೆ. ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರಾರಂಭವಾದ ಮಡಿಲು ಅಕ್ಕಿ ಅರ್ಪಿಸುವ ಕಾರ್ಯಕ್ರಮವು ಜಾತ್ರಾ ಮಹೋತ್ಸವದವರೆಗೂ ದೇವಸ್ಥಾನದಲ್ಲಿ ಮುಂದುವರೆದು ಭಕ್ತಾದಿಗಳಿಂದ ಮಡಿಲು ಅಕ್ಕಿ ಸ್ವೀಕರಿಸಲಾಗುತ್ತದೆ.
ದೇವಸ್ಥಾನ ಸಮಿತಿ ಕಾರ್ಯದರ್ಶಿ ಕಿರಣ್ ಕುಮಾರ್, ರಮೇಶ್, ಗುರುಮೂರ್ತಿ, ದಿವಾಕರ್, ಪ್ರಸನ್ನ, ಯಶವಂತ, ನಿರಂಜನ್ ಕುಮಾರ್, ಮಧು, ಲೋಕೇಶ್, ಮಂಜುನಾಥ್, ನವೀನ್ ಕುಮಾರ್, ಪೂಜಾರ್ ರಮೇಶ್, ಹೊನ್ನಪ್ಪ, ರಂಗಣ್ಣ, ಮಲ್ಲೇಶ್, ಉದ್ಯಮಿ ಗುರುರಾಜ್, ಮುರಳೀಧರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.