ಸಕಲೇಶಪುರ: ತಾಲ್ಲೂಕಿನಾದ್ಯಂತ ಮಂಗಳವಾರ ಇಡೀ ದಿನ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಮುಂಜಾನೆ 3 ಗಂಟೆಯಿಂದಲೇ ಬಿಡುವಿಲ್ಲದಂತೆ ಒಂದೇ ಸಮನೆ ಮಳೆ ಸುರಿಯುತ್ತಿದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಯಿತು. ಮಾರನಹಳ್ಳಿಯಿಂದ ಆನೇಮಹಲ್‌ವರೆಗೆ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ತಡೆಗೋಡೆಗಳು ಅಲ್ಲಲ್ಲಿ ಕುಸಿದಿದ್ದು, ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆಗಳು ಕಂಡು ಬಂದಿದೆ.
ಆನೇಮಹಲ್ ಬಳಿ ಭಾರೀ ಎತ್ತರದ ಗುಡ್ಡವನ್ನು 90 ಡಿಗ್ರಿಯಲ್ಲಿ ಕತ್ತರಿಸಿರುವುದರಿಂದ 15 ದಿನಗಳ ಹಿಂದೆ ಕುಸಿದಿತ್ತು. ಅದೇ ಸ್ಥಳದಲ್ಲಿ ಇನ್ನೂ ಕುಸಿಯುವ ಸಾಧ್ಯತೆ ಇರುವುದರಿಂದ ಗುತ್ತಿಗೆದಾರ ಕಂಪನಿ ಸಿಬ್ಬಂದಿ ಪ್ಲಾಸ್ಟಿಕ್ ಹೊದಿಗೆ ಹೊದಿಸುತ್ತಿದ್ದದ್ದು ಕಂಡು ಬಂತು.
ಪಶ್ಚಿಮಘಟ್ಟದ ಅಂಚಿನಲ್ಲಿರುವ ಅತ್ತಿಹಳ್ಳಿ, ಬಿಸಿಲೆ, ಕಾಗಿನಹರೆ, ದೇವಾಲದಕೆರೆ, ಕುಮಾರಳ್ಳಿ ಮಾರನಹಳ್ಳಿ ಸೇರಿದಂತೆ ಹೆತ್ತೂರು, ಹಾನುಬಾಳು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 20ಸೆಂ.ಮೀ. ಮಳೆ ದಾಖಲಾಗಿದೆ.
ಪಟ್ಟಣ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಸಹ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ರಸ್ತೆಯ ಮೇಲೆ ಹಾಗೂ ವಿದ್ಯುತ್ ತಂತಿಯ ಮೇಲೆ ಬಿದ್ದು ಗ್ರಾಮೀಣ ಪ್ರದೇಶಗಳ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
24X7 ಸಹಾಯವಾಣಿ
ತಾಲ್ಲೂಕು ಕಚೇರಿಯಲ್ಲಿ 24X7 ಸಹಾಯವಾಣಿ (08173244004) ತೆರೆಯಲಾಗಿದ್ದು ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಯಾವುದೇ ಸಮಸ್ಯೆ ಉಂಟಾದರೆ ಅಥವಾ ಸಮಸ್ಯೆ ಉಂಟಾಗುವ ಸಾಧ್ಯತೆ ಕಂಡು ಬಂದರೆ ಕೂಡಲೇ ಸಹಾಯವಾಣಿ ಸಂಪರ್ಕಿಸುವಂತೆ ಎಂದು ತಹಶೀಲ್ದಾರ್ ಅರವಿಂದ್ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ 6 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಕೇಂದ್ರದಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ. ಅಪಾಯದ ಅಂಚಿನಲ್ಲಿ ಇರುವ ನದಿ ಹಳ್ಳ ಕೆರೆ ಕಟ್ಟೆಗಳು ಝರಿ ಜಲಪಾತಗಳ ಬಳಿ ಯಾರೂ ಹೋಗದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.
ಬಿಡುವಿಲ್ಲದೇ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಕುಸಿಯುವ ಮರ ಬೀಳುವ ಹಾಗೂ ಇನ್ನಿತರ ಅಪಾಯಗಳು ಸಂಭವಿಸುವ ಸಾಧ್ಯತೆ ಇರುವಂತಹ ಸ್ಥಳಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು.-ಡಾ.ಎಂ.ಕೆ. ಶ್ರುತಿ, ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.