
ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಅನಧಿಕೃತ ಗೂಡಂಗಡಿಗಳ ವಿರುದ್ಧ ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗಿನಿಂದಲೇ ಕಾರ್ಯಾಚರಣೆ ಆರಂಭಿಸಿದ್ದು, ಅತಿಕ್ರಮಣ ತೆರವುಗೊಳಿಸಿದರು.
ರಸ್ತೆ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಮುಂಚಿತವಾಗಿ ನೋಟಿಸ್ ನೀಡಲಾಗಿದ್ದು, ನಿಗದಿತ ಗಡುವಿನೊಳಗೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಗಡುವು ಮುಗಿದರೂ ಅನಧಿಕೃತ ಗೂಡಂಗಡಿ ತೆರವುಗೊಳಿಸದ ಹಿನ್ನೆಲೆ ಮಹಾನಗರಪಾಲಿಕೆ ಸಿಬ್ಬಂದಿ ಕಠಿಣ ಕ್ರಮಕ್ಕೆ ಮುಂದಾದರು.
ಪಾಲಿಕೆ ಎಂಜಿನಿಯರ್ ಕವಿತಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೆಸಿಬಿ ಯಂತ್ರೋಪಕರಣ ಬಳಸಿಕೊಂಡು ಹತ್ತಾರು ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡಲಾಯಿತು. ಪೌರಕಾರ್ಮಿಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿಯುತ ಕಾರ್ಯಾಚರಣೆ ನಡೆಯಿತು.
ಮಾರುಕಟ್ಟೆ ಪ್ರದೇಶಕ್ಕೆ ನಿತ್ಯ ಬರುವ ಸಾರ್ವಜನಿಕರಿಗೆ ಸಂಚಾರದಲ್ಲಿ ತೊಂದರೆ ಉಂಟಾಗುತ್ತಿರುವುದು, ರಸ್ತೆ ಕಿರಿದಾಗುತ್ತಿರುವುದು ಮತ್ತು ಅಪಘಾತಗಳ ಅಪಾಯ ಹೆಚ್ಚುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಗರದಲ್ಲಿ ಸಂಚಾರ ಸುಗಮವಾಗಲು ಹಾಗೂ ಪಾದಚಾರಿಗಳಿಗೆ ಅಡಚಣೆ ಆಗದಂತೆ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಅತಿಕ್ರಮಣ ಮುಕ್ತಗೊಳಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿನ ರಸ್ತೆ ಹಾಗೂ ಫುಟ್‌ಪಾತ್ ಒತ್ತುವರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.
ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿ, ಗೂಡಂಗಡಿ ಮತ್ತು ತಾತ್ಕಾಲಿಕ ಗೂಡಂಗಡಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.
ಇತ್ತೀಚೆಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಅಧಿಕಾರಿಗಳ ಸಭೆ ಕರೆದು ರಸ್ತೆ ಮತ್ತು ಫುಟ್‌ಪಾತ್ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕವಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರ ಅನುಸಾರವಾಗಿ ಪಾಲಿಕೆ ಅಧಿಕಾರಿಗಳು ಈ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.