ADVERTISEMENT

ಬೇಲೂರು: ‘ಖಾದಿ, ಖಾಕಿ, ಖಾವಿ ತಮ್ಮ ಕರ್ತವ್ಯ ಪಾಲಿಸಿದರೆ ದೇಶ ಸುಭಿಕ್ಷ’

​ಪ್ರಜಾವಾಣಿ ವಾರ್ತೆ
Published 8 ಮೇ 2025, 11:13 IST
Last Updated 8 ಮೇ 2025, 11:13 IST
ಬೇಲೂರು ತಾಲ್ಲೂಕಿನ ಗೋವಿನಹಳ್ಳಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ನಿಜಗುಣಾನಂದ ಸ್ವಾಮೀಜಿ ಉದ್ಘಾಟಿಸಿದರು. ಧಮ್ಮವೀರ ಭಂತೇಜಿ,  ಶಾಸಕ ಎಚ್.ಕೆ.ಸುರೇಶ್, ಸಾಲುಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ ಬಳ್ಳೂರು ಉಮೇಶ್ ಪಾಲ್ಗೊಂಡಿದ್ದರು
ಬೇಲೂರು ತಾಲ್ಲೂಕಿನ ಗೋವಿನಹಳ್ಳಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ನಿಜಗುಣಾನಂದ ಸ್ವಾಮೀಜಿ ಉದ್ಘಾಟಿಸಿದರು. ಧಮ್ಮವೀರ ಭಂತೇಜಿ,  ಶಾಸಕ ಎಚ್.ಕೆ.ಸುರೇಶ್, ಸಾಲುಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ ಬಳ್ಳೂರು ಉಮೇಶ್ ಪಾಲ್ಗೊಂಡಿದ್ದರು   

ಬೇಲೂರು: ‘ಖಾದಿ, ಖಾಕಿ, ಖಾವಿ ಬದಲಾಗಿ ತಮ್ಮ ಕರ್ತವ್ಯಗಳನ್ನು ಪಾಲಿಸಿದರೆ ದೇಶ ಸುಭಿಕ್ಷವಾಗುತ್ತದೆ’ ಎಂದು ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗೋವಿನಹಳ್ಳಿಯಲ್ಲಿ ಬುಧವಾರ ರಾತ್ರಿ ಅಂಬೇಡ್ಕರ್ ಯುವಕ ಸಂಘದಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಭಯೋತ್ಪಾದನೆ ನಿಲ್ಲಬೇಕು. ಮಹಮ್ಮದ್ ಪೈಗಂಬರ್, ಜಿಸಸ್ ಸೇರಿದಂತೆ ಎಲ್ಲ ದಾರ್ಶನಿಕರು ಅಹಿಂಸೆಯನ್ನೇ ಬೋಧಿಸಿ ಶಾಂತಿಯನ್ನು ಬಯಸಿದವರು. ಯಾವುದೇ ಧರ್ಮವು ಕೊಲ್ಲು ಎಂದು ಹೇಳುವುದಿಲ್ಲ. ಬೇರೆ ದೇಶಗಳಲ್ಲಿ ಯುದ್ಧ ನಡೆದು ದೇಶ ಹಾಳಾದರೆ ಆ ದೇಶವನ್ನು ಪ್ರತಿನಿಧಿಸುವ ದೇಶಗಳಿವೆ. ಆದರೆ ಭಾರತ ಹಾಳಾದರೆ, ಭಾರತವನ್ನು ಪ್ರತಿನಿಧಿಸುವ ದೇಶಗಳಿಲ್ಲ, ಭಾರತ ಸಂಸ್ಕೃತಿ, ಸಂಸ್ಕಾರವನ್ನು ಹೊಂದಿರುವ ಅತ್ಯಂತ ಶ್ರೇಷ್ಠ ದೇಶವಾಗಿದೆ’ ಎಂದರು.

ADVERTISEMENT

‘ಕಾರ್ಯಕ್ರಮಗಳಲ್ಲಿ ಅನುಕರಣೀಯ ಭಾಷಣಗಳನ್ನು ಮಾಡದೇ, ಪುಸ್ತಕಗಳನ್ನು ಓದಿ ತಿಳಿದುಕೊಂಡು ಅನುಭವದಿಂದ ಮಾತನಾಡಬೇಕು’ ಎಂದರು.

‘ಧರ್ಮವೆಂದರೆ ದೇವಸ್ಥಾನಗಳನ್ನು ಸುತ್ತುವುದಲ್ಲ, ಮಾನವೀಯ ಮೌಲ್ಯಗಳೊಂದಿಗೆ ಬದುಕುವುದು, ದೇಶದಲ್ಲಿ 18 ಸಾವಿರ ವೃದ್ಧಾಶ್ರಮಗಳು ತಲೆ ಎತ್ತಿರುವುದು ಶೋಚನೀಯ’ ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ಬುದ್ಧ, ಬಸವ, ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ನಾವುಗಳು ಅವರ ಆಶಯದಂತೆ ನಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು’ ಎಂದರು.

‘ಗೋವಿನಹಳ್ಳಿ ಚಿಕ್ಕಗ್ರಾಮವಾಗಿದ್ದರೂ ಸಹ ಇಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಿರುವುದು ಶ್ಲಾಘನೀಯ, ಮುಂದೊಂದು ದಿನ ಈ ಗ್ರಾಮ ಇಡೀ ದೇಶಕ್ಕೆ ಪರಿಚಿತವಾಗುತ್ತದೆ’ ಎಂದರು.

ಸಾಲುಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ ಬಳ್ಳೂರು ಉಮೇಶ್ ಮಾತನಾಡಿ, ‘ಜಾತಿ ವ್ಯವಸ್ಥೆ, ಶೋಷಣೆ ಇಂದಿಗೂ ಸಹ ಮುಂದುವರಿದಿದ್ದು, ಅನುಭವಿಸಿದವರಿಗೆ ಅದರ ನೋವು ಗೊತ್ತಿರಲು ಸಾಧ್ಯ. ಮನುಷ್ಯರು, ಮನುಷ್ಯರಂತೆ ಬದುಕಲು ಮುಂದಾಗಬೇಕು’ ಎಂದರು.

ಧಮ್ಮವೀರ ಬಂತೇಜಿ, ಪುರಸಭೆ ಸದಸ್ಯ ಸಿ.ಎನ್.ದಾನಿ ಮಾತನಾಡಿದರು.

ಬಿಜೆಪಿ ಮುಖಂಡರಾದ ಪರ್ವತಯ್ಯ, ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್, ವೀರಶೈವ  ಲಿಂಗಾಯತ ಯುವ ಘಟಕದ ನಿಕಟಪೂರ್ವ ಅಧ್ಯಕ್ಷ ಗೆಂಡೇಹಳ್ಳಿ ಚೇತನ್, ಬಂಟೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಇಸ್ಮಾಯಿಲ್, ಭೀಮ್ ಆರ್ಮಿ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ್, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಗಾಯಕ ಕುಮಾರ್, ಪ್ರಮುಖರಾದ ನಾರಾಯಣಪುರ ರಘು, ಓಂಬಳೇಶ್, ಶಶಿಧರ್ ಮಾರ್ಯ, ಮಂಜಪ್ಪ ಗದ್ದೆಮನೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.