ADVERTISEMENT

ಅಧಿಕಾರಕ್ಕಾಗಿ ಕೃಷಿ ಪತ್ತಿನ ನಿರ್ದೇಶಕ ಅಪಹರಣ: ಸ್ವರೂಪ್ ಆರೋಪ

ಸೋಲಿನ ಭೀತಿಯಿಂದ ಶಾಸಕರ ಹಿಂಬಾಲಕರಿಂದ ಕೃತ್ಯ; ಸ್ವರೂಪ್ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 13:24 IST
Last Updated 19 ಮಾರ್ಚ್ 2021, 13:24 IST
ಎಚ್‌.ಪಿ.ಸ್ವರೂಪ್
ಎಚ್‌.ಪಿ.ಸ್ವರೂಪ್   

ಹಾಸನ: ‘ತಾಲ್ಲೂಕಿನ ಯಾರೇಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಕೃಷ್ಣೇಗೌಡ ಎಂಬುವರ ಮೇಲೆ ಶಾಸಕ ಪ್ರೀತಂ ಗೌಡರ ಹಿಂಬಾಲಕರು ಹಲ್ಲೆ ನಡೆಸಿ ಅಪಹರಿಸಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್‌ ಆರೋಪಿಸಿದರು.

ಸಹಕಾರ ಸಂಘದಲ್ಲಿ ಸೂಪರವೈಸರ್‌ ಸೇರಿ ಒಟ್ಟು 12 ಜನ ನಿರ್ದೇಶಕರಿದ್ದಾರೆ. ಮಾರ್ಚ್‌ 20 ರಂದು ಸಂಘದ
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಅಧಿಕಾರ ಹಿಡಿಯುವ ಉದ್ದೇಶದಿಂದ
ಕೃಷ್ಣೇಗೌಡ ಅವರನ್ನು ಅಪಹರಿಸಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಶುಕ್ರವಾರ ಬೆಳಿಗ್ಗೆಸ್ಮೇಹಿತರ ಜತೆ ಕೃಷ್ಣೇಗೌಡರುಕಾರಿನಲ್ಲಿ ಹೋಗುತ್ತಿದ್ದಾಗನಗರದ ಎಂ.ಜಿ ರಸ್ತೆ ಡೆಂಟಲ್‌ ಕಾಲೇಜಿನ ತಿರುವಿನಲ್ಲಿ ಉದ್ದೂರಿನ ಪುರ್ಶಿ, ಮಣಚನಹಳ್ಳಿಯ ಧರ್ಮ, ಕುಮಾರ, ಸುರೇಶ, ಪ್ರಶಾಂತ್‌, ಹರೀಶ್‌ ಮತ್ತು ಯತೀಶ್‌ ಎಂಬುವರು ಅಡ್ಡಗಟ್ಟಿ, ಅವರನ್ನು ಬೆದರಿಸಿ, ಹಲ್ಲೆ ಮಾಡಿ ಅಪಹರಿಸಿದ್ದಾರೆ.

ADVERTISEMENT

ಜತೆಯಲ್ಲಿದ್ದ ವೆಂಕಟೇಶ್‌ ಮತ್ತು ಜಗದೀಶ್‌ ವಾಪಸ್‌ ಮನೆಗೆ ಬಂದು ಅವರ ಪುತ್ರ ಚಿರಂಜೀವಿಗೆ ವಿಷಯ ತಿಳಿಸಿದ್ದಾರೆ. ಚಿರಂಜೀವಿ ತಮ್ಮ ತಂದೆಗೆಕರೆ ಮಾಡಿದಾಗ ‘ತನ್ನನ್ನು ಅಪಹರಣ ಮಾಡಿ ದೊಡ್ಡಪುರ ಬಳಿ ಕರೆದುಕೊಂಡು ಹೋಗುತ್ತಿದ್ದಾರೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಮತ್ತೆ ಕರೆ ಮಾಡಿದಾಗ ಸ್ವಿಚ್‌ ಆಫ್‌ ಎಂಬ ಉತ್ತರ ಬಂದಿದೆ’ ಎಂದು
ವಿವರಿಸಿದರು.

ಈ ಸಂಬಂಧ ನಗರದ ಕೆ.ಆರ್‌. ಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷ್ಣೇಗೌಡರನ್ನು ಪತ್ತೆ ಹಚ್ಚಿ
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಶನಿವಾರ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ
ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಕೃಷ್ಣೇಗೌಡ ಅವರ ಪತ್ನಿ ತುಳಸಿ ಮಾತನಾಡಿ, ‘ಅನೇಕ ವರ್ಷಗಳಿಂದ ನನ್ನ ಪತಿ ಜೆಡಿಎಸ್‌ ಪರವಾಗಿ ಕೆಲಸ
ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಬಿಜೆಪಿಯ ಕೆಲವರು ತುಂಬಾ ಕಿರುಕುಳ ನೀಡುತ್ತಿದ್ದಾರೆ. ನಿರ್ಮಾಣ ಹಂತದಲ್ಲಿದ್ದ
ನಮ್ಮ ಮನೆಗೂ ಹಾನಿ ಮಾಡಿದ್ದಾರೆ. ಸಹಕಾರ ಸಂಘದ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದಾಗಲೂ ಸಾಕಷ್ಟು
ಬೆದರಿಕೆ ಕರೆಗಳು ಬಂದಿದ್ದವು. ಆದಷ್ಟು ಬೇಗೆ ಪತಿಯನ್ನು ಹುಡುಕಿಕೊಡಿ’ ಎಂದು ಕಣ್ಣೀರಿಟ್ಟರು

ಗೋಷ್ಠಿಯಲ್ಲಿ ಜೆಡಿಎಸ್‌ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌. ದ್ಯಾವೇಗೌಡ, ಕೃಷ್ಣೇಗೌಡರ ಪುತ್ರ ಚಿರಂಜೀವಿ,
ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.