
ಡಾ: ಮೋಹನ್ ಮಲ್ಲಪ್ಪ
ಕೊಣನೂರು: ‘ಮಾರುಕಟ್ಟೆಯಲ್ಲಿ ತಂಬಾಕಿನ ಬೆಲೆ ದಿಢೀರ್ ಕುಸಿದಿರುವುದರಿಂದ ಬೆಳೆಗಾರರು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ತಂಬಾಕು ಮಂಡಳಿ ಬೆಲೆ ಕುಸಿತ ತಡೆದು ರೈತರ ಹಿತ ಪಾಪಾಡಬೇಕು’ ಎಂದು ಜೆಡಿಎಸ್ ಮುಖಂಡ ಮೋಹನ್ ಮಲ್ಲಪ್ಪ ಆಗ್ರಹಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆ ಆರಂಭದಲ್ಲಿ ಪ್ರಥಮ ದರ್ಜೆ ತಂಬಾಕಿಗೆ ಪ್ರತಿ ಕೆ.ಜಿ.ಗೆ ₹300 ನಿಂದ ರಿಂದ ₹320 ಕ್ಕೆ ಮಾರಾಟವಾಗಿತ್ತು. ಈಗ ಏಕಾಏಕಿ ಪ್ರತಿ ಕೆಜಿ ತಂಬಾಕಿಗೆ ₹50 ಕುಸಿತ ಕಂಡಿದೆ. ಎರಡು ಮತ್ತು ಮೂರನೇ ದರ್ಜೆ ತಂಬಾಕು ₹150ನಿಂದ ₹200ಕ್ಕೆ ಕುಸಿತ ಕಂಡಿದೆ. ಇದರಿಂದಾಗಿ ತಂಬಾಕು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದರಕ್ಕೆ ತಂಬಾಕು ಮಾರಾಟ ಮಾಡಿದರೆ ಸಾಲ ಮಾಡಿ ತಂಬಾಕು ಬೆಳೆದಿರುವ ಬೆಳೆಗಾರರ ಸಾಲ ಮರುಪಾವತಿಸುವುದಾದರೂ ಹೇಗೆ? ವಾಣಿಜ್ಯ ಬೆಳೆಗೆ ವೈಜ್ಞಾನಿಕ ದರ ನೀಡದೇ ರೈತರು ಹತಾಶೆಗೊಂಡು ಪ್ರತಿಭಟಿಸುವ ಪರಿಸ್ಥಿತಿ ಎದುರಾಗಿದೆ. ಆದುದರಿಂದ ತಂಬಾಕು ಮಂಡಳಿ ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಾಣಿಜ್ಯ ಬೆಳೆ ತಂಬಾಕು ಹಳೆ ಮೈಸೂರು ಭಾಗದ ಜೀವನಾಡಿಯಾಗಿದ್ದು, ಪ್ರತಿಬಾರಿಯೂ ದರ ಕುಸಿತ ಎದುರಾಗಿ ಬೆಳೆಗಾರರು ಬೀದಿಗಿಳಿಯಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಳಿಗೆ ಬೆಳೆಗಾರರ ನಿಯೋಗ ತೆರಳಿ ಸಮಸ್ಯೆ ಬಗ್ಗೆ ವಿವರಿಸಿ ವೈಜ್ಞಾನಿಕ ದರ ಸಿಗುವಂತೆ ಕ್ರಮವಹಿಸಲು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
‘ಕರ್ನಾಟಕದಲ್ಲಿ 2025-26ನೇ ಸಾಲಿಗೆ ಮಂಡಳಿ ಗರಿಷ್ಠ 100 ಮಿಲಿಯನ್ ಕೆ.ಜಿ ಬೆಳೆಯಲು ಅನುಮತಿ ನೀಡಿತ್ತು. ಆದರೆ ಮೇ, ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ 80ರಿಂದ 85 ಮಿಲಿಯನ್ ಕೆಜಿ ಮಾತ್ರ ತಂಬಾಕು ಉತ್ಪಾದನೆಯಾಗಿದೆ. ಆದರೆ ಆಂಧ್ರಪ್ರದೇಶದಲ್ಲಿ ಮಂಡಳಿ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚು ತಂಬಾಕು ಬೆಳೆಯಲಾಗಿದೆ. ಅಲ್ಲಿಯೆ ಕಂಪನಿಗಳು ಹೆಚ್ಚಿನ ಖರೀದಿ ನಡೆಸಿರುವುದರಿಂದ ಇಲ್ಲಿನ ತಂಬಾಕು ದರ ಕುಸಿಯುತ್ತಿದೆ. ರಾಜ್ಯದ ತಂಬಾಕಿನಲ್ಲಿ ಆಯಿಲ್ ನಿಕೋಟಿನ್ ಇರುವುದರಿಂದ ಹೆಚ್ಚಿನ ಬೇಡಿಕೆಯಿದೆ. ಆದರೆ ವೈಜ್ಞಾನಿಕ ದರ ಸಿಗುತ್ತಿಲ್ಲ. ಈ ಬಗ್ಗೆಯೂ ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆಯಲಾಗುವುದು’ ಎಂದು ಮೋಹನ್ ಮಲ್ಲಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.