ADVERTISEMENT

ಗಣಿಗಾರಿಕೆ |ಆರೋಗ್ಯದ ಮೇಲೆ ದುಷ್ಪರಿಣಾಮ ಆತಂಕ: ಮಕ್ಕಳನ್ನು ಶಾಲೆಗೆ ಕಳಿಸದ ಪೋಷಕರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 19:17 IST
Last Updated 24 ಫೆಬ್ರುವರಿ 2026, 19:17 IST
ಕೊಣನೂರು ಸಮೀಪದ ನೆಹರು ನಗರದ ಶಾಲೆಯು ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದೆ. 
ಕೊಣನೂರು ಸಮೀಪದ ನೆಹರು ನಗರದ ಶಾಲೆಯು ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದೆ.    

ಕೊಣನೂರು (ಹಾಸನ ಜಿಲ್ಲೆ): ‘ಕಲ್ಲುಗಣಿಗಾರಿಕೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಲಿದೆ’ ಎಂದು ಇಲ್ಲಿನ ನೆಹರು ನಗರದ ನಿವಾಸಿಗಳು, ಒಂದು ತಿಂಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಶಾಸಕ ಎ.ಮಂಜು ಅವರೊಂದಿಗೆ ಬಿಇಒ, ಶಿಕ್ಷಕರು, ಮನೆಗಳಿಗೆ ತೆರಳಿ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. 

‘ಗ್ರಾಮದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಸಮೀಪವೇ ಗಣಿಗಾರಿಕೆ ನಡೆಯುತ್ತಿದೆ. ಸಿಡಿಮದ್ದು ಸ್ಫೋಟದ ಶಬ್ದ ಹಾಗೂ ದೂಳು ಬರುತ್ತಿದೆ. ಮಕ್ಕಳು ಭಯ ಬೀಳುತ್ತಿದ್ದಾರೆ. ಕ್ರಷರ್ ನಿಲ್ಲಿಸುವವರೆಗೆ ಅಥವಾ ಸ್ಥಳಾಂತರಿಸುವವರೆಗೆ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ’ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ. 

ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರೆಗೆ 16 ಮಕ್ಕಳಿದ್ದು, ಅಂಗನವಾಡಿಯಲ್ಲಿ 7 ಮಕ್ಕಳಿವೆ. ಜ 19 ರಿಂದ ಯಾರೂ ಶಾಲೆಗೆ ಬರುತ್ತಿಲ್ಲ.

ADVERTISEMENT

ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಮೀಸಲಿರುವ ಗ್ರಾಮದಲ್ಲಿ 100 ದಲಿತ ಕುಟುಂಬಗಳಿವೆ. ‘ಸಮೀಪದ ಅರಸೀಕಟ್ಟೆ ಕಾವಲಿನ ಸರ್ವೆ ನಂ.116ರ 2 ಎಕರೆ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆದಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂಬುದು ಗ್ರಾಮಸ್ಥರ ಆರೋಪ.

ಕೊಣನೂರು ಸಮೀಪದ ನೆಹರೂ ನಗರದಲ್ಲಿ ಶಾಸಕ ಎ.ಮಂಜು ಇತ್ತೀಚೆಗೆ ಸಭೆ ನಡೆಸಿದ್ದರು.

‘ಗ್ರಾಮದ ಮನೆಗಳಿಗೂ ತೊಂದರೆಯಾಗುತ್ತಿದೆ. ದೂರು ನೀಡಿದರೂ ಜಿಲ್ಲಾಡಳಿತ ಕ್ರಮ ಜರುಗಿಸಿಲ್ಲ. ಕಲ್ಲು ಸಾಗಿಸುವ ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ’ ಎಂಬುದು ಪೋಷಕರ ದೂರು.

‘ಗಣಿಗಾರಿಕೆಯಿಂದ ಬರುವ ದೂಳು, ಕಲ್ಲು ಚೂರುಗಳಿಂದ ಕೃಷಿ ಭೂಮಿಗೂ ಹಾನಿ ಆಗುತ್ತಿದೆ.  ಶಾಲೆ, ಅಂಗನವಾಡಿ ಕೇಂದ್ರ, ಅಂಬೇಡ್ಕರ್ ಭವನಗಳು ಗಣಿಗಾರಿಕೆ ಪ್ರದೇಶಕ್ಕೆ ಸಮೀಪದಲ್ಲಿವೆ. ಸ್ಫೋಟದ ತೀವ್ರತೆಯಿಂದ ಕಟ್ಟಡಗಳು ಬಿರುಕು ಬಿಡುವ ಅಥವಾ ಕುಸಿಯುವ ಭೀತಿ ಇದೆ’ ಎಂಬುದು ಗ್ರಾಮಸ್ಥರ ವಾದ.

ಶಾಸಕರ ನೇತೃತ್ವದಲ್ಲಿ ಪೋಷಕರ ಸಭೆ ನಡೆಸಲಾಗಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ್ದೇವೆ. ಕ್ರಷರ್‌ಗೆ ಸಂಬಂಧಿಸಿ ಮೇಲಧಿಕಾರಿಗಳು ಕ್ರಮ ವಹಿಸಬೇಕಾಗಿದೆ
ಕೆ.ಸಿ.ಸೌಮ್ಯಾ ಅರಕಲಗೂಡು ತಹಶೀಲ್ದಾರ್
ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಲ್ಲಿ ಅನೇಕ ಬಾರಿ ಮನವಿ ಮಾಡಲಾಗಿದೆ. ಶಿಕ್ಷಕರು ಮನೆ ಮನೆ ಭೇಟಿ ಮಾಡುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಕೆ.ಪಿ.ನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.