ADVERTISEMENT

ಕೊಣನೂರು: ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ತುಳುಷಷ್ಠಿ ರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:44 IST
Last Updated 27 ಡಿಸೆಂಬರ್ 2025, 5:44 IST
ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳುಷಷ್ಠಿ ರಥೋತ್ಸವವು ಭಕ್ತಭಾವದಿಂದ ನೆರವೇರಿತು.
ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳುಷಷ್ಠಿ ರಥೋತ್ಸವವು ಭಕ್ತಭಾವದಿಂದ ನೆರವೇರಿತು.   

ಕೊಣನೂರು: ‘ತಿಂಗಳ ತೇರು’ ಎಂದೇ ಪ್ರಸಿದ್ಧವಾಗಿರುವ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ರಥೋತ್ಸವಕ್ಕೆ ಜಿಲ್ಲೆಯ ವಿವಿಧೆಡೆ, ಅಕ್ಕಪಕ್ಕದ ಜಿಲ್ಲೆಗಳಿಂದ ಸಾರ್ವಜನಿಕರು, ಭಕ್ತರು ನಸುಕಿನ ವೇಳೆ ಬಂಧು ಕಾವೇರಿ ನದಿಯಲ್ಲಿ ಸ್ನಾನ ಮುಗಿಸಿ, ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದರು. ಮಧ್ಯಾಹ್ನ ರಥ ಬೀದಿಯಲ್ಲಿ ತೇರು ಸೇತುವೆವರೆಗೆ ಚಲಿಸಿ, ದೇವಾಲಯಕ್ಕೆ ಆವರಣಕ್ಕೆ ಹಿಂದಿರುಗಿತು.

 ಸುಬ್ರಹ್ಮಣ್ಯಸ್ವಾಮಿಗೆ ವಿವಿಧ ವಿಶೇಷ ಪೂಜೆಗಳನ್ನು ನೆರವೇರಿಸಿ, ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿಟ್ಟು , ರಥಪೂಜೆ ನೆರವೇರಿಸಲಾಯಿತು.  ನಂತರ ಸಾವಿರಾರು ಭಕ್ತರು ಸ್ವಾಮಿಯ ನಾಮಸ್ಮರಣೆ ಮಾಡುತ್ತಾ ರಥ ಎಳೆದರು.  ಲಗೋರಿ ಬೊಂಬೆಗಳು, ಜನಪದ ಕಲಾವಿದರ ತಂಡಗಳು ಮನಸೆಳೆದವು.

ADVERTISEMENT

 ಸಹಸ್ರಾರು ಭಕ್ತರು ಕಾವೇರಿ ಸ್ನಾನಘಟ್ಟದಲ್ಲಿ ಪವಿತ್ರ ಸ್ನಾನ ಮಾಡಿ, ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ವ್ಯಾಸಾಂಜನೇಯ, ಅಗಸ್ತ್ಯೇಶ್ವರ, ಪಟ್ಟಾಭಿರಾಮ, ಲಕ್ಷ್ಮೀನರಸಿಂಹ, ರಾಘವೇಂದ್ರ ಮಠ, ಬಸವೇಶ್ವರ, ರಾಮೇಶ್ವರ ದೇವಾಲಯ ದರ್ಶನ ನಡೆಸಿದರು.  ಕಾವೇರಿ ಸ್ನಾನಘಟ್ಟದ ದಂಡೆಯಲ್ಲಿರುವ ನಾಗರ ಕಲ್ಲುಗಳಿಗೆ ಹಾಲು, ತುಪ್ಪ ಎರೆದು, ಮುಡಿ ನೀಡಿ, ಹಣ್ಣುತುಪ್ಪ ಅರ್ಪಿಸಿ, ಕರ್ಜಿತುರಿ ನಾಗರಸೆಡೆ ನೀಡಿ ತಮ್ಮ ಹರಕೆ ಒಪ್ಪಿಸಿದರು. ರಾಮೇಶ್ವರ ದೇವಾಲಯದ ಬಳಿಯ ವಹ್ನಿಪುಷ್ಕರಿಣಿಯ ಮೀನುಗಳಿಗೆ ಪುರಿ, ಕಡಲೆಕಾಯಿ  ನೀಡಿದರು.

ಶಾಸಕ ಎ.ಮಂಜು, ದೇವಾಲಯದ ಪಾರುಪತ್ತೇದಾರ ಶ್ರೀರಮೇಶ್ ಭಟ್, ಪಂಚಾಯಿತಿ ಸದಸ್ಯರು, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿ ಸಿಬ್ಬಂದಿಗಳು ಮತ್ತು ಸ್ವಯಂಸೇವಕರು ಮತ್ತು  ಸಾವಿರಾರು ಭಕ್ತರು  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.