ADVERTISEMENT

ಕೊಣನೂರು: ಮಹಿಳೆ ಶವ ಪತ್ತೆ; ಮಗು ನಾಪತ್ತೆ

ದೂರು ಸ್ವೀಕರಿಸದೇ ಪೊಲೀಸರ ನಿರ್ಲಕ್ಷ: ಸಂಬಂಧಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 5:07 IST
Last Updated 18 ನವೆಂಬರ್ 2025, 5:07 IST
ಪೊಲೀಸರೊಂದಿಗೆ ಮೃತ ಮಹಿಳೆಯ ಸಂಬಂಧಿಕರು ವಾಗ್ವಾದ ನಡೆಸಿದರು.
ಪೊಲೀಸರೊಂದಿಗೆ ಮೃತ ಮಹಿಳೆಯ ಸಂಬಂಧಿಕರು ವಾಗ್ವಾದ ನಡೆಸಿದರು.   

ಕೊಣನೂರು: ರಾಮನಾಥಪುರ ಹೋಬಳಿಯ ಬೆಟ್ಟಸೋಗೆ ಬಳಿ ಕಾವೇದಿ ನದಿಯಲ್ಲಿ ಸಾಲಿಗ್ರಾಮದ ಮಹಿಳೆ ಶವ ದೊರಕಿದ್ದು, ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಪೊಲೀಸರ ಜೊತೆಗೆ ಸಂಬಂಧಿಕರು ಸೋಮವಾರ ವಾಗ್ವಾದ ನಡೆಸಿದರು.

ಹಲವಾರು ಬಾರಿ ಪೊಲೀಸ್ ಠಾಣೆಗೆ ಬಂದರೂ ದೂರು ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದು, ಮಹಿಳೆ ಶವವನ್ನು ಕುಟುಂಬಸ್ಥರ ಗಮನಕ್ಕೆ ತರದೇ ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದನ್ನು ಪ್ರಶ್ನಿಸಿದ ಕುಟುಂಬಸ್ಥರು, ಪೊಲೀಸ್ ಠಾಣೆಯ ಬಳಿ ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾಲಿಗ್ರಾಮ ತಾಲ್ಲೂಕಿನ ಮಹಾದೇವಿ (29) ಎಂಬುವವರ ಶವ ಸೋಮವಾರ ಕಾವೇರಿ ನದಿಯಲ್ಲಿ ಸಿಕ್ಕಿದೆ. ಈಕೆಯನ್ನು ದೊಡ್ಡಮಗ್ಗೆ ಹೋಬಳಿಯ ಸೀಬಳ್ಳಿಯ ಕುಮಾರ್ ಎಸ್.ಬಿ. ಎಂಬುವವರಿಗೆ 3 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮಹಾದೇವಿಗೆ ತನ್ನ ಗಂಡ ಕೆಟ್ಟದ್ದಾಗಿ ಮೇಸೇಜ್ ಮಾಡಿದ್ದು, ಕೊಣನೂರು ಠಾಣೆಗೆ ದೂರು ನೀಡುವುದಾಗಿ ಹೇಳಿ ನ.14 ರಂದು ಮಗುವಿನೊಂದಿಗೆ ಬಂದಿದ್ದಳು. ಆದರೆ, ನಾಪತ್ತೆಯಾಗಿದ್ದಾಳೆ ಎಂದು ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಸೋಮವಾರ ಬೆಳಿಗ್ಗೆ ಮಹಾದೇವಿಯ ಶವ ಕಾವೇರಿ ನದಿಯಲ್ಲಿ ಸಿಕ್ಕಿತ್ತು. ಮಧ್ಯಾಹ್ನದ ವೇಳೆಗೆ ಬಂದ ಮೃತ ಮಹಿಳೆಯ ಸಂಬಂಧಿಕರು ಮೃತದೇಹವು ಇಲ್ಲದಿರುವುದನ್ನು ತಿಳಿದು ಆಕ್ರೋಶಗೊಂಡರು. ನಮ್ಮ ಅನುಮತಿಯಿಲ್ಲದೆ ಶವವನ್ನು ಎಲ್ಲಿ ಕೊಂಡೊಯ್ದಿರಿ ಎಂದು ಪೊಲೀಸರನ್ನು ಪ್ರಶ್ನಿಸಿದರು.

ಮೃತಳ ತಮ್ಮ ಮಾತನಾಡಿ, ‘ನಮ್ಮ ಅಕ್ಕ ಮಹಾದೇವಿಗೆ ಗಂಡನ ಮನೆಯಲ್ಲಿ ಹಲ್ಲೆ ಮತ್ತು ಕಿರುಕುಳ ಹೆಚ್ಚಾಗಿತ್ತು. ಅನೇಕ ಬಾರಿ ಕೊಣನೂರು ಠಾಣೆಗೆ ದೂರು ನೀಡಲು ಬಂದರೂ ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷಿಸಿದ್ದಾರೆ. ಇದರಿಂದ ಆಕೆ ನೀರು ಪಾಲಾಗಿದ್ದಾಳೆ. ಮಗುವು ನಾಪತ್ತೆಯಾಗಿದೆ. ಮಗವನ್ನು ಹುಡುಕಿಕೊಟ್ಟು ಸಾವಿಗೆ ನ್ಯಾಯ ಕೊಡಿಸಬೇಕು’ ಎಂದು ಒತ್ತಾಯಿಸಿದರು.

‘ನನ್ನ ಅಕ್ಕ ಬಂದಾಗ ಅವಳನ್ನು ಏಕವಚನದಲ್ಲಿ ನಿಂದಿಸಿ, ನಾನು ಬಂದಾಗಲೂ ದೂರು ತೆಗೆದುಕೊಳ್ಳುವುದಿಲ್ಲ ಎಂದು ಏಕವಚನದಲ್ಲಿ ಪೊಲೀಸರು ನಿಂದಿಸಿದ್ದಾರೆ’ ಎಂದು ದೂರಿದರು.

ಮಹಿಳೆ ಬರೆದಿಟ್ಟಿರುವ ಡೆತ್ ನೋಟ್ ಸಿಕ್ಕಿದ್ದು, ಸಾವಿಗೂ ಮುನ್ನ ಆಕೆ ಮಾಡಿರುವ ವಿಡಿಯೊ ಸಹ ಸಿಕ್ದಿದೆ. ಕೊಣನೂರು ಆಸ್ಪತ್ರೆಯಲ್ಲಿ ಶವ ಇರುವುದಾಗಿ ತಿಳಿದ ನಂತರ ಸಂಬಂಧಿಕರ ಆಕ್ರೋಶ ಸ್ವಲ್ಪ ಕಡಿಮೆಯಾಯಿತು.

ಮೃತ ಮಹಾದೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.