
ಟೆಲಿಸ್ಕೋಪ್ ತಯಾರಿಸಿದ ಹಳೇಬೀಡಿನ ಕೆಪಿಎಸ್ ಶಾಲೆಯ ಪಿಯು ವಿಭಾಗದ ವಿದ್ಯಾರ್ಥಿ ಪ್ರೀತಮ್ ಆರ್.ಪಿ. ಅವರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಕಾರ್ಯಾಗಾರದ ಕುರಿತು ಮಾಹಿತಿ ನೀಡಿದರು
ಹಳೇಬೀಡು: ದೂರದರ್ಶಕ (ಟೆಲಿಸ್ಕೋಪ್) ತಯಾರಿಕಾ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ವರ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಪಾಲುದಾರಿಕೆ ಪಡೆದಿರುವ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ಕಾಲೇಜು ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿ, ರಾಜನಶಿರಿಯೂರು ಗ್ರಾಮದ ಪ್ರೀತಮ್ ಆರ್.ಪಿ. ಅವರ ಸಾಧನೆಯಿಂದ ಕಾಲೇಜಿನಲ್ಲಿ ಸಂಭ್ರಮ ಮನೆ ಮಾಡಿದೆ.
ಅಕ್ಟೋಬರ್ 1ರಿಂದ 9ರವರೆಗೆ ಕರ್ನಾಟಕ ವಿಜ್ಞಾನ ಪರಿಷತ್ ವತಿಯಿಂದ ದೊಡ್ಡಬಳ್ಳಾಪುರದ ಸ್ಕೌಟ್ ಭವನದಲ್ಲಿ ‘ನಾನು ವಿಜ್ಞಾನಿ ಹಾಗೂ ಟೆಲಿಸ್ಕೋಪ್’ ಕಾರ್ಯಾಗಾರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ 168 ವಿದ್ಯಾರ್ಥಿಗಳು ಸೇರಿ ಟೆಲಿಸ್ಕೋಪ್ ತಯಾರಿಸಿದ್ದು ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿತ್ತು. ಈ ಕಾರ್ಯಾಗಾರದಲ್ಲಿ ಹಳೇಬೀಡಿನ ವಿದ್ಯಾರ್ಥಿ ಪ್ರೀತಮ್ ಸಹ ಟೆಲಿಸ್ಕೋಪ್ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ನೇತೃತ್ವದಲ್ಲಿ ಆಯೋಜಿಸಿದ್ದ, ಕಾರ್ಯಾಗಾರದಲ್ಲಿ ರಾಜ್ಯದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಾಸನ ಜಿಲ್ಲೆಯಿಂದ ಭಾಗವಹಿಸಿದ್ದ 23 ವಿದ್ಯಾರ್ಥಿಗಳ ಪೈಕಿ ಕೆಪಿಎಸ್ ಪಿಯು ಕಾಲೇಜು ವಿಭಾಗದ ಪ್ರೀತಮ್ ಸಹ ಭಾಗವಹಿಸಿದ್ದ. ಅತಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಟೆಲಿಸ್ಕೋಪ್ ತಯಾರಿಸಿದ್ದರಿಂದ ವಿದ್ಯಾರ್ಥಿಗಳು ವರ್ಲ್ಡ್ ಬುಕ್ ಆಫ್ ರಿಕಾರ್ಡ್, ಏಷ್ಯಾ ಬುಕ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ದಾಖಲಾಗಿದ್ದಾರೆ. ಅವಕಾಶ ದೊರಕಿದ್ದರಿಂದ ಕಾಲೇಜಿನ ಕೀರ್ತಿ ಹೆಚ್ಚಿದೆ ಎಂದು ಪ್ರಾಂಶುಪಾಲೆ ವಿನುತಾ ಬಿ.ಎಸ್. ಹೇಳಿದರು.
ಟೆಲಿಸ್ಕೋಪ್ ತಯಾರಿಸುವ ಪರಿಕರ ಖರೀದಿಗೆ ₹ 15 ಸಾವಿರ ವೆಚ್ಚವಾಗುತ್ತದೆ. ಹಾಸನ ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ರವಿ ನಾಕಲಗೂಡು, ಭಾರತೀಯ ಸೇವಾ ದಳದ ಸಂಚಾಲಕಿ ರಾಣಿ ವಿ.ಎಸ್., ದಾನಿಗಳ ಸಹಕಾರದಿಂದ ಖರ್ಚು ವೆಚ್ಚ ಭರಿಸಿದರು. ಪ್ರಾಂಶುಪಾಲೆ ವಿನುತಾ ಅವರು ಕಾರ್ಯಾಗಾರಕ್ಕೆ ಕರೆದುಕೊಂಡು ಹೋದರು. ಉಪನ್ಯಾಸಕಿ ಗೋಮತಿ ಧೈರ್ಯ ತುಂಬಿದರು. ಎಲ್ಲ ಉಪನ್ಯಾಸಕರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರಿಂದ ನಗರದ ವಿದ್ಯಾರ್ಥಿಗಳಂತೆ ಕಾರ್ಯಾಗಾರದಲ್ಲಿ ಯಶಸ್ವಿಯಾದೆ ಎಂದು ಪ್ರೀತಮ್ ಹೇಳಿದರು.
ಸ್ನೇಹಿತ ಪ್ರೀತಮ್‌ಗೆ ದೊರಕಿದ ಗೌರವದಿಂದ ಸಂತಸವಾಗಿದೆ. ನಮಗೂ ಟೆಲಿಸ್ಕೋಪ್ ಕುರಿತು ಹೆಚ್ಚಿನ ಮಾಹಿತಿ ದೊರಕಿತು. ಅಧ್ಯಯನದ ಆಸಕ್ತಿ ಮೂಡಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಪಾರಮ್ಯ ಹೆಚ್ಚು. ಆದರೆ, ಸರ್ಕಾರಿ ಕಾಲೇಜಿನ ಗ್ರಾಮೀಣ ವಿದ್ಯಾರ್ಥಿಗೆ ಅವಕಾಶ ಸಿಕ್ಕಿದ್ದು ಉತ್ತಮ ಬೆಳವಣಿಗೆನಿತ್ಯಾನಂದ, ಗ್ರಾಮ ಪಂಚಾಯಿತಿ ಸದಸ್ಯ
ನಿತ್ಯಾನಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.