ADVERTISEMENT

ಚನ್ನರಾಯಪಟ್ಟಣ ತಾಲ್ಲೂಕು ಪಂಚಾಯಿತಿ, ಆಸ್ಪತ್ರೆಗೆ ಕೃಷ್ಣ ಬೈರೇಗೌಡ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:09 IST
Last Updated 17 ಫೆಬ್ರುವರಿ 2026, 6:09 IST
ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ರೋಗಿಗಳಿಂದ ಮಾಹಿತಿ ಪಡೆದರು
ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ರೋಗಿಗಳಿಂದ ಮಾಹಿತಿ ಪಡೆದರು   

ಚನ್ನರಾಯಪಟ್ಟಣ: ಇಲ್ಲಿನ ತಾಲ್ಲೂಕು ಪಂಚಾಯಿತಿ ಹಾಗೂ ತಾಲ್ಲೂಕು ಆಸ್ಪತ್ರೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ದಿಢೀರ್ ಭೇಟಿ ನೀಡಿ, ವಿವಿಧ ಕೊಠಡಿಗಳಿಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ತಾಲ್ಲೂಕು ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಪ್ರಗತಿ ಕುರಿತು ವಿವರ ಪಡೆದು, ಯಾವ ಕೆಲಸಕ್ಕೆ ಎಷ್ಟು ಅನುದಾನ ವಿನಿಯೋಗವಾಗಿದೆ ಎಂಬುದನ್ನು ಪ್ರಶ್ನಿಸಿದರು. ಹೊಸ ಯೋಜನೆಗಳ ರೂಪುರೇಷೆ ಹಾಗೂ ಅವುಗಳನ್ನು ಯಾವ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಪಡೆದರು.

ಪಿಎಂ ಗತಿ ಶಕ್ತಿ ಯೋಜನೆಯ ಜಾರಿಯ ಸ್ಥಿತಿ ಮತ್ತು ಹೊಸ ಕಾನೂನು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿದ್ದು ಎಂಬ ಮಾಹಿತಿಯನ್ನೂ ಸಚಿವರು ಕೇಳಿದರು. ತೋಟಗಾರಿಕೆ ಯೋಜನೆಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ತಿಳಿಸಿದರು.

ADVERTISEMENT

ಈ ವೇಳೆ ಗ್ರಾಮಸ್ಥರೊಬ್ಬರು, ನಮ್ಮ ಜಮೀನನ್ನು ಆರು ಬಾರಿ ಅಳತೆ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಚಿವರಿಗೆ ದೂರು ನೀಡಿದರು. ಮತ್ತೊಂದೆಡೆ, ನಾನಾ ಯೋಜನೆಗಳು ಹಾಗೂ ಕಚೇರಿ ಕಾರ್ಯಗಳಿಗೆ ಅಗತ್ಯ ಆ್ಯಪ್‌ಗಳನ್ನು ಬಳಸಲು ಡಾಂಗಲ್ ಇಂಟರ್‌ನೆಟ್ ಸಂಪರ್ಕ ಸಿಗುತ್ತಿಲ್ಲ. ಅಪ್ಲಿಕೇಶನ್‌ಗಳು ಅಪ್‌ಡೇಟ್, ಡೌನ್‌ಲೋಡ್ ಆಗುತ್ತಿಲ್ಲ ಎಂದು ಪಿಡಿಒ ದೂರು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಸಮಸ್ಯೆ ಅರ್ಥಮಾಡಿಕೊಳ್ಳದೇ ಮಾತನಾಡಬೇಡಿ. ಮೊದಲು ಲಾಗ್‌ಇನ್ ಆಗಿ ಎಂದು ಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಹೊಳೆನರಸೀಪುರ ಇಒ ಅವರದ್ದು ಮಾತ್ರ ಲಾಗ್‌ಇನ್ ಆಗಿದೆ ಎಂಬ ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಸಚಿವರು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ತಾಲ್ಲೂಕು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳೊಂದಿಗೆ ಮಾತನಾಡಿ, ಲಭ್ಯವಿರುವ ಸೌಕರ್ಯಗಳ ಕುರಿತು ಪರಿಶೀಲಿಸಿದರು.

ಪರಿಶೀಲನಾ ಸಂದರ್ಭದಲ್ಲಿ ಶಾಸಕ ಸಿ.ಎನ್‌. ಬಾಲಕೃಷ್ಣ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಎಸ್ಪಿ ತಮ್ಮಯ್ಯ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.