ಹಾಸನ: ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನಾಂಬ ದರ್ಶನಕ್ಕೆ ಬಂದಾಗ, ಜಿಲ್ಲಾಡಳಿತ ಅಗೌರವ ತೋರಿದೆ’ ಎಂದು ಆರೋಪಿಸಿ ಜೆಡಿಎಸ್ ಶಾಸಕರಾದ ಎ.ಮಂಜು, ಸ್ವರೂಪ್ ಪ್ರಕಾಶ್, ಪಕ್ಷದ ಮುಖಂಡರು, ಸದಸ್ಯರು ದೇವಸ್ಥಾನ ಮುಖ್ಯ ಪ್ರವೇಶ ದ್ವಾರದಲ್ಲಿ ಪ್ರತಿಭಟಿಸಿದರು.
ಭಾನುವಾರ ಬೆಳಿಗ್ಗೆ 11.30ಕ್ಕೆ ಪ್ರಾರಂಭವಾದ ಪ್ರತಿಭಟನೆ ಮಧ್ಯಾಹ್ನದವರೆಗೂ ಮುಂದುವರಿದಿತ್ತು. ರಸ್ತೆಯಲ್ಲೇ ಟೆಂಟ್ ಹಾಕಿಕೊಂಡು ಕುಳಿತರು. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ದೇವಸ್ಥಾನ ಆಡಳಿತಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಾಹ್ನ 2.30ಕ್ಕೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಶಾಸಕರು, ಜೆಡಿಎಸ್ ಮುಖಂಡರ ಜೊತೆ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಫೋನ್‌ನಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿವರಣೆ ನೀಡಿದರು.
‘ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಕುಮಾರಸ್ವಾಮಿ ಅವರೂ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಗಿರುವ ಘಟನೆಯ ಕುರಿತು ಅವರಿಗೂ ವಿವರಿಸಿದ್ದೇನೆ’ ಎಂದು ಲತಾಕುಮಾರಿ ಹೇಳಿದರು.
ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಿಂದಾಗಿ ಕೆಲಕಾಲ ದರ್ಶನ ವ್ಯವಸ್ಥೆಯಲ್ಲೂ ಗೊಂದಲ ಉಂಟಾಗಿತ್ತು.
ವಿದೇಶ ಪ್ರವಾಸಕ್ಕೆ ಹೋಗುವ ಬದಲು ಶಾಸಕರು ನಗರದಲ್ಲಿದ್ದು ಜಾತ್ರೆಯನ್ನು ಮುನ್ನಡೆಸಿದ್ದರೆ ಇದು ಆಗುತ್ತಿರಲಿಲ್ಲ ಸ್ವರೂಪ್ ಪ್ರಕಾಶ್ ಅವರೇ ಕುಮಾರಸ್ವಾಮಿ ಕ್ಷಮೆ ಕೇಳಬೇಕು.ಪ್ರೀತಂ ಜೆ.ಗೌಡ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.