ADVERTISEMENT

ಹೆತ್ತೂರು | ಸಿಗದ ಮೂಲಸೌಕರ್ಯ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 13:54 IST
Last Updated 19 ಏಪ್ರಿಲ್ 2024, 13:54 IST
ಹೆತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಹಳ್ಳಿಯೂರು,ಕೆಳ್ಳ ಹಾಡ್ಯ, ಕೊಂಡದಗದ್ದೆ, ದಿಣೆಕೇರೆಹಳ್ಳಿಉರು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ಗ್ರಾಮಸ್ಥರು
ಹೆತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಹಳ್ಳಿಯೂರು,ಕೆಳ್ಳ ಹಾಡ್ಯ, ಕೊಂಡದಗದ್ದೆ, ದಿಣೆಕೇರೆಹಳ್ಳಿಉರು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ಗ್ರಾಮಸ್ಥರು   

ಹೆತ್ತೂರು: ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಳ್ಳಿಯೂರು, ಕೆಳ್ಳ ಹಾಡ್ಯ, ಕೊಂಡದಗದ್ದೆ, ದಿಣೆಕೇರೆಹಳ್ಳಿ ಉರು ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಗ್ರಾಮದಲ್ಲಿ ಅರಣ್ಯ ಕಾಯ್ದೆಗಳಿಂದ ಬೇಸತ್ತು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನಕ್ಷೆ ಸಿದ್ಧಪಡಿಸುತ್ತಿದ್ದಾರೆ. ಇದರಿಂದ ಮಲೆನಾಡಿನ ಜನರಿಗೆ ಈ ಕಾಯ್ದೆಗಳು ಮಾರಕವಾಗಿವೆ ಎಂದು ಹೆತ್ತೂರು ಕೃಷ್ಣಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯೂರು ಗ್ರಾಮದಲ್ಲಿ ಸುಮಾರು 1ಸಾವಿರಕ್ಕೂ ಹೆಚ್ಚು ಕುಟುಂಬಗಳು ನೂರಾರು ವರ್ಷಗಳಿಂದ ವಾಸಿಸುತ್ತಿವೆ. ವಾಸ ಇರುವ ಜಾಗ ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆ ಎಂಬ ತಾಂತ್ರಿಕ ಕಾರಣ ಇದೆ. ಸರಿಪಡಿಸುವಲ್ಲಿ ಚುನಾಯಿತ ಪ್ರತಿನಿಧಿಗಳಾಗಲಿ, ಅರಣ್ಯ ಇಲಾಖೆಯಾಗಲಿ ಪ್ರಯತ್ನ ಮಾಡಿಲ್ಲ ಎಂಬ ಅಸಮಾಧಾನ ಗ್ರಾಮಸ್ಥರದಲ್ಲಿದೆ.

ADVERTISEMENT

ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ವಿಧಾನಸಭೆ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಲು ಮುಂದಾಗಿದ್ದರು. ಅಧಿಕಾರಿಗಳು ನೀಡಿದ ಭರವಸೆ ಆಧರಿಸಿ ಮತದಾನ ಮಾಡಿದ್ದರು. ಆದರೆ, ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ ಎಂದು ದೂರಿದರು.

ಈ ಭಾಗದಲ್ಲಿ ಕಾಡಾನೆಗಳು ಹೆಚ್ಚಾಗಿವೆ. ಜಮೀನಿಗೆ ದಾಖಲೆ ಪತ್ರ ಇಲ್ಲದಿರುವುದರಿಂದ ಬೆಳೆಹಾನಿ ಪರಿಹಾರವನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಯನ್ನು ಸರ್ಕಾರ ಪರಿಹಾರ ಮಾಡಬೇಕು ಎಂಬುದು ಗ್ರಾಮಸ್ಥ ಉಮೇಶ್ ಎಚ್.ಜಿ. ಒತ್ತಾಯಿಸಿದರು.

ರಸ್ತೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಬಗೆಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿ ಬ್ಯಾನರ್ ಅಳವಡಿಸಿದ್ದರು. ಬಳಿಕ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಭಾಗದ ರಸ್ತೆ‌ ಸಂಪೂರ್ಣ ಕುಸಿಯುವ ಹಂತ ತಲುಪಿತ್ತು. ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದರು. ಸೂಕ್ತ ಪರಿಹಾರ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ ಇದೂವರೆಗೆ ಈಡೇರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದಿನ ಚುನಾವಣೆಗಳಲ್ಲೂ ಈ ರೀತಿಯ ಕೂಗು ಎದ್ದಿತ್ತು. ಕೆಲವೆಡೆ ಸಮಸ್ಯೆ ಪರಿಹಾರವಾಗಿದ್ದರೆ, ಬಹುತೇಕ ಕಡೆ ಹಾಗೇ ಉಳಿದುಕೊಂಡಿವೆ. ಕಾಡಂಚಿನ ಜನರ ಮನವಿ ಮಾತ್ರ ಯಾರಿಗೂ ಕೇಳದಾಗಿದೆ ಎನ್ನುವ ಆಕ್ರೋಶ ಗ್ರಾಮಸ್ಥರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.