ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟದ ಎಚ್ಚರಿಕೆ | ಜಿಲ್ಲಾಧಿಕಾರಿ ಕಚೇರಿ ಎದುರು 47 ಕುಟುಂಬಗಳಿಂದ ಪ್ರತಿಭಟನೆ
ಹಾಸನ: ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಕಾರೆಕೆರೆ ಕಾವಲು ವ್ಯಾಪ್ತಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ ಜಮೀನು ಸ್ವಾಧೀನ ಇಲ್ಲದವರಿಗೆ ನೀಡಿರುವ ದರಖಾಸ್ತು ಮಂಜೂರಾತಿ ರದ್ದುಗೊಳಿಸಿ, 60 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ 47 ಭೂರಹಿತ ದಲಿತ ಕುಟುಂಬಗಳಿಗೆ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಮಾತನಾಡಿ, ಕಾರೆಕೆರೆ ಕಾವಲು ಗ್ರಾಮದ 47 ದಲಿತ ಕುಟುಂಬಗಳು ದೀರ್ಘಕಾಲದಿಂದಲೂ ಭೂ ಸ್ವಾಧೀನದಲ್ಲಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಮೂಲ ಮಂಜೂರಾತಿ ರದ್ದುಗೊಳಿಸಿ ಹಾಲಿ ಸಾಗುವಳಿಯಲ್ಲಿರುವ ಕುಟುಂಬಗಳಿಗೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
'ದರಖಾಸ್ತು ಮಂಜೂರಾತಿ ರದ್ದುಗೊಳಿಸುವ ಕುರಿತು 2002ರ ಆಗಸ್ಟ್ 6ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಮೈಸೂರು ವಿಭಾಗೀಯ ಕಚೇರಿಗೆ ಪತ್ರ ಬರೆಯಲಾಗಿದ್ದು, 2022ರ ಸೆಪ್ಟೆಂಬರ್ 3ರಂದು ವಿಭಾಗೀಯ ಕಚೇರಿಯಿಂದ ಜಿಲ್ಲಾಧಿಕಾರಿಗೆ ಸ್ಪಷ್ಟೀಕರಣಕ್ಕಾಗಿ ಪತ್ರ ಬಂದಿದೆ. ಇದುವರೆಗೂ ಸಕಾರಾತ್ಮಕ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಲಿ ಉಳುಮೆ ಮಾಡುತ್ತಿರುವ ದಲಿತರನ್ನು ಭೂಮಿಯಿಂದ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದು, ದೀರ್ಘಕಾಲದ ಸ್ವಾಧೀನಾನುಭವವನ್ನು ಪರಿಗಣಿಸಿ ಸ್ಥಳ ಪರಿಶೀಲಿಸಿ, ಹಾಲಿ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.
ಕೆಪಿಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಕಾರೆಕೆರೆ ಕಾವಲು ಗ್ರಾಮ ಘಟಕದ ಅಧ್ಯಕ್ಷ ಎಚ್. ಸ್ವಾಮಿ, ಕಾರ್ಯದರ್ಶಿ ಪಾಂಡುರಂಗ, ದೇವರಾಜು, ಸುನಿಲ್, ರವಿಕುಮಾರ್, ಧರ್ಮಾ, ಮೀನಾಕ್ಷಿ, ಮೂರ್ತಿ, ಪ್ರಕಾಶ್, ಸುರೇಶ್, ಬಾಬು, ಶಾಂತಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
‘ಸಾಗುವಳಿ ಮಾಡುವವರಿಗೆ ಕೊಡಿ’
ಕಾರೆಕೆರೆ ಕಾವಲಿನ ಸರ್ವೆ ನಂಬರ್‌ಗಳು 48 49 50 78 ರಿಂದ 96 104 107 108 ಗ್ರಾಮದ ಸರ್ವೆ ನಂಬರ್‌ಗಳು 11 12 ಹಾಗೂ ಜುಂಜನಹಳ್ಳಿ ಗ್ರಾಮದ ಸರ್ವೆ ನಂಬರ್‌ಗಳು 20 27 28 30 ಸೇರಿ ಒಟ್ಟು 246 ಎಕರೆ ಭೂಮಿಯನ್ನು 1966ರಲ್ಲಿ 30 ದಲಿತ ಕುಟುಂಬಗಳಿಗೆ ಮಂಜೂರು ಮಾಡಲಾಗಿತ್ತು. ಆದರೆ ಆ ಪೈಕಿ ಕೇವಲ 10 ಕುಟುಂಬಗಳು ಮಾತ್ರ ವಾಸವಿದ್ದು ಭೂಮಿಯನ್ನು ಉಳುಮೆ ಮಾಡುತ್ತಿವೆ. ಉಳಿದ 20 ಕುಟುಂಬಗಳು ಇಲ್ಲಿಯವರೆಗೆ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿಲ್ಲ ಎಂದು ಎಂ.ಜಿ. ಪೃಥ್ವಿ ಆರೋಪಿಸಿದರು. ಇದೇ ಪ್ರದೇಶದಲ್ಲಿ ಆರು ದಶಕಗಳಿಂದ ಕಾರೆಕೆರೆ ಕಾವಲು ಗ್ರಾಮದ 47 ಭೂರಹಿತ ದಲಿತ ಕುಟುಂಬಗಳು ನಿರಂತರವಾಗಿ ಭೂಮಿಯಲ್ಲಿ ಸ್ವಾಧೀನಾನುಭವದಲ್ಲಿದ್ದು ಕೃಷಿ ಚಟುವಟಿಕೆ ನಡೆಸುತ್ತಿವೆ. ಅನುಭವದಲ್ಲಿ ಇಲ್ಲದವರ ಮೂಲ ಮಂಜೂರಾತಿಯನ್ನು ರದ್ದುಗೊಳಿಸಿ ಹಾಲಿ ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಭೂಮಿ ಮಂಜೂರು ಮಾಡುವಂತೆ ತಾಲ್ಲೂಕು ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಜೊತೆಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಅಡಿಯಲ್ಲಿ ಅರ್ಜಿ ನಮೂನೆಗಳು 50 53 ಮತ್ತು 57 ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.