ಕೊಣನೂರು: ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಸ್ವಂತ ನಿವೇಶನವನ್ನು ದಾನ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿದ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಡಿ.ಮಂಜುನಾಥ ಮಾದರಿಯಾಗಿದ್ದಾರೆ.
ತಮ್ಮ ಊರಿನಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಸ್ಥಳ ದೊರಕದೇ ಇರುವುದರಿಂದ ರಾಮನಾಥಪುರ ಹೋಬಳಿಯ ಕೇರಳಾಪುರದ ನಿವಾಸಿ ಡಿ.ಮಂಜುನಾಥ್, ₹25 ಲಕ್ಷ ಬೆಲೆಬಾಳುವ 30X40 ಅಳತೆಯ ತಮ್ಮ ಸ್ವಂತ ನಿವೇಶನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಸರಿಗೆ ದಾನ ನೀಡಿದ್ದಾರೆ.
ಕೇರಳಾಪುರದ ಪಟ್ಟಸಾಲಿ ನೇಕಾರ ಸಮುದಾಯ ಮುಖಂಡ, ಉದ್ಯಮಿ ಮತ್ತು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ , ಹಾಲಿ ಸದಸ್ಯರಾಗಿರುವ ಡಿ.ಮಂಜುನಾಥ್, ಒಂದು ವರ್ಷದ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಆಗ ಕೇರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಮೂಲಸೌಕರ್ಯ ಒದಗಿಸುವಲ್ಲಿ ಸ್ಪಂದಿಸುತ್ತಿದ್ದರು. ಪಂಚಾಯಿತಿಯಲ್ಲಿ ಇತ್ಯಥ್ಯವಾಗದೇ ಉಳಿದಿದ್ದ ಜನತೆಗೆ ಸಂಬಂಧಿಸಿದ ಕಡತಗಳನ್ನು ಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸುಮಾರು ಹತ್ತು ಸಾವಿರ ಜನಸಂಖ್ಯೆಯಿರುವ ಕೇರಳಾಪುರದಲ್ಲಿ ಮೊದಲಿದ್ದ 3 ಅಂಗನವಾಡಿಗಳ ಜೊತೆಗೆ 4ನೇ ಅಂಗನವಾಡಿ ಕಟ್ಟಡ ಮಂಜೂರಾಗಿತ್ತು. ನಿವೇಶನ ಸಿಗದೇ ಒಂದು ವರ್ಷದಿಂದ ಕಟ್ಟಡ ನಿರ್ಮಾಣಕ್ಕೆ ಹಿನ್ನಡೆಯಾಗಿತ್ತು. ಇದೀಗ ತಮ್ಮ ಆಸ್ತಿಯನ್ನೇ ನೀಡುವ ನಿರ್ಧಾರ ಮಾಡಿದ ಡಿ.ಮಂಜುನಾಥ್, ಡಿ. 18 ರಂದು ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ನಿವೇಶನದ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಕೇರಳಾಪುರದ ರಾಮಮಂದಿರದ ಬಳಿ, ಎ.ಕೆ. ಕಾಲೊನಿ ಮತ್ತು ಇಂದಿರಾ ಬಡಾವಣೆಯ ಕಟ್ಟಡ ಸೇರಿದಂತೆ 3 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಜನತಾ ಬಡಾವಣೆಗೆ ಮಂಜೂರಾಗಿರುವ ಅಂಗನವಾಡಿ ಕಟ್ಟಡಕ್ಕೆ ಸ್ಥಳಾವಕಾಶ ದೊರಕದ್ದರಿಂದ ಇಲ್ಲಿನ ಮಕ್ಕಳನ್ನು ಸಮೀಪದ ಇಂದಿರಾ ಬಡಾವಣೆಯಲ್ಲಿನ ಅಂಗನವಾಡಿಗೆ ದಾಖಲು ಮಾಡಿಕೊಳ್ಳಲಾಗಿತ್ತು.
ಗ್ರಾಮದಲ್ಲಿ ಇರುವ 3 ಅಂಗವಾಡಿಗಳಲ್ಲಿ 38 ಗರ್ಭಿಣಿಯರು, ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯ ಸವಲತ್ತು ಒದಗಿಸುತ್ತಿದ್ದು, 3 ರಿಂದ 6 ವರ್ಷ ವಯೋಮಿತಿಯ 50 ಮಕ್ಕಳು ದಾಖಲಾಗಿದ್ದಾರೆ. 6 ತಿಂಗಳಿನಿಂದ 3 ವರ್ಷದೊಳಗಿನ ವಯೋಮಿತಿಯ 85 ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ.
ವರ್ಷದ ಹಿಂದೆ ಕೇರಳಾಪುರಕ್ಕೆ ಮಂಜೂರಾಗಿದ್ದ ಅಂಗನವಾಡಿ ಕಟ್ಟಡಕ್ಕೆ ನಿವೇಶನ ಸಿಕ್ಕಿರಲಿಲ್ಲ ಮಂಜುನಾಥ್ ಸ್ವ ಇಚ್ಛೆಯಿಂದ ನಿವೇಶನ ನೀಡಿದ್ದು ಮಕ್ಕಳಿಗೆ ಅನುಕೂಲ ಆಗಲಿದೆವೆಂಕಟೇಶ್ ಎಂ.ಪಿ. ಸಿಡಿಪಿಒ ಅರಕಲಗೂಡು
ಸರ್ಕಾರದಿಂದ ಅನುಮತಿ ದೊರಕಿದರೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ದೊರಕದಿರುವುದು ಬೇಸರ ತಂದಿತ್ತು. ನಮ್ಮ ಊರಿನ ಒಳ್ಳೆಯದಕ್ಕಾಗಿ ನನ್ನ ಸ್ವಂತ ಆಸ್ತಿ ನೀಡುವುದರಲ್ಲಿ ನನಗೆ ತೃಪ್ತಿಯಿದೆಡಿ.ಮಂಜುನಾಥ್ ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.