ಚನ್ನರಾಯಪಟ್ಟಣ: ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಯ ಜವಾಬ್ದಾರಿ ಹೆಚ್ಚಾಗುತ್ತಿರುವುದರಿಂದ ಗೌರವಧನ ಹೆಚ್ಚಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಕೆಎಂಎಫ್ ಸಹಯೋಗದಲ್ಲಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ರಾಗಿ ಮಾಲ್ಟ್ ವಿತರಣೆ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಡುಗೆ ಸಿಬ್ಬಂದಿ ಬಿಸಿಯೂಟ ತಯಾರು ಮಾಡುವುದು, ಕ್ಷೀರ ಭಾಗ್ಯ ಯೋಜನೆ, ರಾಗಿಮಾಲ್ಟ್ ತಯಾರಿಸುವ ಜವಾಬ್ದಾರಿ ಇರುವುದರಿಂದ ತಿಂಗಳಿಗೆ ಹತ್ತು ಸಾವಿರ ಗೌರವಧನ ನಿಗದಿಪಡಿಸಬೇಕು ಎಂದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಪ್ರಜೆಗಳ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ರಾಜ್ಯ ಸರ್ಕಾರ ವಿನೂತನ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆ ವಿದ್ಯಾರ್ಥಿಗಳು ಮಾನಸಿಕ, ದೈಹಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಹಂತಹಂತವಾಗಿ ಸೌಲಭ್ಯ ಒದಗಿಸುತ್ತಿದೆ. ಇವುಗಳ ಪ್ರಯೋಜನ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಬಿ.ಎಂ. ಗೋವಿಂದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚೆಲುವನಾರಾಯಣಸ್ವಾಮಿ, ಸರ್ಕಾರಿ ನೌಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ. ಮಂಜಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ಮುಖ್ಯ ಶಿಕ್ಷಕ ಬಿ.ಆರ್. ರಮೇಶ್, ಪುರಸಭಾ ಸದಸ್ಯೆ ಕೆ.ಎನ್. ಬನಶಂಕರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಲೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.