ADVERTISEMENT

ಆಯೋಗಕ್ಕೆ ಆಸ್ತಿಯ ತಪ್ಪು ಮಾಹಿತಿ, ಮೈತ್ರಿ ಅಭ್ಯರ್ಥಿಗೆ ಕಾನೂನು ತೊಡಕು: ಎ.ಮಂಜು

​ಪ್ರಜಾವಾಣಿ ವಾರ್ತೆ
Published 12 ಮೇ 2019, 11:19 IST
Last Updated 12 ಮೇ 2019, 11:19 IST
   

ಚನ್ನರಾಯಪಟ್ಟಣ: ಆಸ್ತಿಗೆ ಸಂಬಂಧಿಸಿದಂತೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದರಿಂದ ಕಾನೂನು ತೊಡಕು ಎದುರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಎ.ಮಂಜು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ. ದೂರು ದೃಢಪಟ್ಟರೆ ಮುಂದಿನ 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಯೋಗ ತೀರ್ಮಾನ ತೆಗೆದುಕೊಳ್ಳಬಹುದು. ಹಲವು ವರ್ಷಗಳ ಹಿಂದೆ ಚಾಮರಾಜನಗರ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಯೊಬ್ಬರು ತಪ್ಪು ಮಾಹಿತಿ ನೀಡಿದ್ದರಿಂದ ಚುನಾವಣೆಗೆ ಸ್ಪರ್ಧಿಸದಂತೆ ಆಯೋಗ ಸೂಚಿಸಿತ್ತು ಎಂದು ಉದಾಹರಣೆ ಸಮೇತ ಹೇಳಿದರು.

ರಾಜ್ಯದಲ್ಲಿ ಬರ ಆವರಿಸಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಈ ದಿನಗಳಲ್ಲಿ ಮುಖ್ಯಮಂತ್ರಿ ರೆಸಾರ್ಟ್‌ನಲ್ಲಿರುವುದು ತರವಲ್ಲ. ಜನರ ಸಮಸ್ಯೆಗೆ ಸ್ಪಂದಿಸಬೇಕಾದುದು ಮುಖ್ಯಮಂತ್ರಿಯ ಕರ್ತವ್ಯ ಎಂದರು.

ADVERTISEMENT

‘ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ 15-20 ಸಾವಿರ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 30-35 ಸಾವಿರ ಮತಗಳ ಮುನ್ನಡೆ ದೊರಕಲಿದೆ. ಉಳಿದಂತೆ ಹಾಸನ, ಅರಕಲಗೂರು, ಬೇಲೂರು, ಅರಸೀಕೆರೆ, ಕಡೂರು, ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ ದೊರಕಲಿದೆ. ಹಾಗಾಗಿ ಹಾಸನ ಲೋಕಸಭಾ ಚುನಾವಣೆಯಲ್ಲಿ ನಾನು ಗೆಲ್ಲುವುದು ಗ್ಯಾರಂಟಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.