ADVERTISEMENT

ಮದ್ಯಪಾನ ನಿಷೇಧ ನಿರ್ಣಯ ಕೈಗೊಳ್ಳಲಿ: ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:03 IST
Last Updated 15 ಅಕ್ಟೋಬರ್ 2025, 2:03 IST
ಸಕಲೇಶಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಗಾಂಧಿ ಸ್ಮರಣೆ ಹಾಗೂ ಜನಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳನ್ನು ನಡೆಸಿ ಮದ್ಯಪಾನ ಸೇವನೆ ವಿರೋಧಿ ಘೋಷಣೆಗಳನ್ನು ಕೂಗಿದರು
ಸಕಲೇಶಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಗಾಂಧಿ ಸ್ಮರಣೆ ಹಾಗೂ ಜನಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳನ್ನು ನಡೆಸಿ ಮದ್ಯಪಾನ ಸೇವನೆ ವಿರೋಧಿ ಘೋಷಣೆಗಳನ್ನು ಕೂಗಿದರು   

ಸಕಲೇಶಪುರ: ರಾಜ್ಯ ಸರ್ಕಾರ ಮದ್ಯಪಾನ ನಿಷೇಧದಂತಹ ಕ್ರಾಂತಿಕಾರಿ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಆಗ್ರಹಿಸಿದರು.

ಮಹತ್ಮಾ ಗಾಂಧಿ ಅವರ 156ನೇ ಜಯಂತಿ ಅಂಗವಾಗಿ ಮಂಗಳವಾರ ಪಟ್ಟಣದ ಪುರಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ರೋಟರಿ ಸಂಸ್ಥೆ, ಲಯನ್ಸ್ ಸೇವಾ ಸಂಸ್ಥೆ, ತಾಲ್ಲೂಕು ಅರೋಗ್ಯ ಇಲಾಖೆ, ಹಾಸನ ಜಿಲ್ಲಾ ಬಂಟರ ಸಂಘ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಗಾಂಧಿ ಸ್ಮರಣೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಸರ್ಕಾರಗಳು ಗಾಂಧಿ ಹೆಸರು ಹೇಳುತ್ತಾ ಅವರ ತತ್ವಗಳನ್ನು ಗಾಳಿಗೆ ತೋರುತ್ತಿವೆ. ಪ್ರತಿ ತಿಂಗಳು ಅಬಕಾರಿ ಇಲಾಖೆಯಿಂದ ವರಮಾನ ಹೆಚ್ಚುವಂತೆ ಮಾಡುವ ಮೂಲಕ, ಪರೋಕ್ಷವಾಗಿ ಜನರನ್ನು ದುಶ್ಚಟಗಳಿಗೆ ದೂಡಿ, ಗಾಂಧಿ ತತ್ವಗಳಿಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿವೆ ಎಂದರು.

ADVERTISEMENT

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ‘ದೀರ್ಘಕಾಲ ಬದುಕಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು. ಇಂದು ಮುಪ್ಪಿಗೂ ಮುನ್ನವೆ ಮರಣಹೊಂದುವವರ ಸಂಖ್ಯೆ ಅಧಿಕವಾಗಿದೆ. ದುಶ್ಚಟಗಳಿಂದ ದೂರ ಇರುವುದು ಉತ್ತಮ’ ಎಂದರು.  

ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ಕುಮಾರ್, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ರಾಜ್ಯಾಧ್ಯಕ್ಷ ಹೊನ್ನವಳ್ಳಿ ಸತೀಶ್, ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಡಾ.ನವೀನ್‌ಚಂದ್ರಶೆಟ್ಟಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಗಿರೀಶ್‌ ಮಂಜುನಾಥ್, ರೋಟರಿ ಸಂಸ್ಥೆಯ ಚನ್ನವೇಣಿ ಎಂ.ಶೆಟ್ಟಿ, ಜೈಬೀಮ್ ಮಂಜುನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ್ ಇದ್ದರು. ಇದೇ ವೇಳೆ ಮದ್ಯಪಾನದಿಂದ ಹೊರ ಬಂದವರನ್ನು ಗೌರವಿಸಲಾಯಿತು. ಹಲವು ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಧ್ಯ‍ಪಾನ ಹಾಗೂ ಧೂಮಪಾನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜನಜಾಗೃತಿ ಜಾಥಾ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.