ADVERTISEMENT

ಬಸ್ತಿಹಳ್ಳಿ | ವೈಭವದ ಮಸ್ತಕಾಭಿಷೇಕ ಮಹೋತ್ಸವ: ಜಿನಮಂದಿರದಲ್ಲಿ ಗಂಧ, ಚಂದನದ ಕಂಪು

ಎಚ್.ಎಸ್.ಅನಿಲ್ ಕುಮಾರ್
Published 27 ಜನವರಿ 2025, 6:49 IST
Last Updated 27 ಜನವರಿ 2025, 6:49 IST
ಹಳೇಬೀಡಿನ ಬಸ್ತಿಹಳ್ಳಿಯ ಜಿನ ಮಂದಿರದ ಶಾಂತಿನಾಥ ತೀರ್ಥಂಕರ ಮೂರ್ತಿಗೆ ಭಾನುವಾರ ಅರಿಶಿಣ ಅಭಿಷೇಕ . 
ಹಳೇಬೀಡಿನ ಬಸ್ತಿಹಳ್ಳಿಯ ಜಿನ ಮಂದಿರದ ಶಾಂತಿನಾಥ ತೀರ್ಥಂಕರ ಮೂರ್ತಿಗೆ ಭಾನುವಾರ ಅರಿಶಿಣ ಅಭಿಷೇಕ .    

ಹಳೇಬೀಡು: ಬಸ್ತಿಹಳ್ಳಿಯ ಹೊಯ್ಸಳರ ಕಾಲದ ಜಿನ ಮಂದಿರದಲ್ಲಿ ಭಾನುವಾರ ಸಂಭ್ರಮ, ಸಡಗರ ಮೊಳಗಿತ್ತು. ಗಂಧ, ಚಂದನದ ಕಂಪಿನೊಂದಿಗೆ ವಿಭಿನ್ನ ಬಣ್ಣದ ಹೂವುಗಳು ಘಮಘಮಿಸಿದವು. ವಿವಿಧ ಮಂಗಳ ದ್ರವ್ಯಗಳಿಂದ ನಡೆದ ಮಹಾಮಸ್ತಕಾಭಿಷೇಕ ಮನಸ್ಸಿಗೆ ವಿಶಿಷ್ಟ ಅನುಭವ ನೀಡಿತು.

ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿ ಸಲಹೆ, ಮಾರ್ಗದರ್ಶನದಲ್ಲಿ ಹಾಸನದ ದಿಗಂಬರ ಜೈನ ಯುವಕ ಸಂಘ ಆಯೋಜಿಸಿದ್ದ ವರ್ಣಮಯ ಅಭಿಷೇಕಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಪ್ರಾಚೀನ ಕಾಲದ ಜೈನ ಬಸದಿಗಳ ಸಂಕೀರ್ಣದ ಭವ್ಯ ಮಂದಿರದಲ್ಲಿರುವ 18 ಅಡಿ ಎತ್ತರದ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿಸಲಾಯಿತು. ಪುರೋಹಿತವರ್ಗ ಹಾಗೂ ಜೈನ ಶ್ರಾವಕ, ಶ್ರಾವಕಿಯರು ಶಾಂತಿನಾಥ ಸ್ವಾಮಿಯಲ್ಲಿ ಪ್ರಾರ್ಥನೆ ನಡೆಸಿದ ನಂತರ ಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಾಯಿತು.

ADVERTISEMENT

108 ಕಳಸಗಳಿಂದ ಜಲಾಭಿಷೇಕ ಮಾಡಿದಾಕ್ಷಣ ಮಂದಸ್ಮಿತ ಮೂರ್ತಿಯು ವಿವಿಧ ಭಂಗಿಯಲ್ಲಿ ಕಂಗೊಳಿಸಿತು. ನಂತರ ಎಳನೀರು, ಕ್ಷೀರ (ಹಾಲು), ಇಕ್ಷುರಸ (ಕಬ್ಬಿನಹಾಲು), ಚತುಷ್ಕೋನ (ನಾಲ್ಕುದಿಕ್ಕಿನಲ್ಲಿ ಸ್ಥಾಪಿಸಿದ) ಕಳಸ, ಶ್ರೀಗಂದ, ಅರಿಸಿನ, ಕಲ್ಕಚೂರ್ಣ (ಅಕ್ಕಿಹಿಟ್ಟು), ಚಂದನ, ಸರ್ವೌಷದ (ಕಷಾಯಗ)ಗಳಿಂದ ಅಭಿಷೇಕ ನೆರವೇರಿಸಲಾಯಿತು.

ಜಗತ್ತಿನ ಸಕಲ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ದೊರಕಲಿ ಎಂದು ಮಹಾಶಾಂತಿ ಮಂತ್ರದೊಂದಿಗೆ ಶಾಂತಿನಾಥ ಮೂರ್ತಿಗೆ ಶಾಂತಿಧಾರೆ ನೆರವೇರಿತು. ಕೊನೆಯಲ್ಲಿ ಬಣ್ಣದ ಹೂವುಗಳಿಂದ ಪುಷ್ಪವೃಷ್ಟಿ ನಡೆಯಿತು. ಶ್ರವಣಬೆಳಗೊಳ ಜೈನ ಮಠದ ಬ್ರಹ್ಮಚರ್ಯ ಆಶ್ರಮದ 50 ಮಕ್ಕಳು ಶ್ವೇತವರ್ಣದ ಉಡುಪಿನೊಂದಿಗೆ ಶಿಸ್ತಿನಿಂದ ಮಂತ್ರಪಠಣ ಮಾಡಿದರು.

ಪುರೋಹಿತರಾದ ಪ್ರತಿಷ್ಠಾ ವಿಶಾರದ ಜೀನರಾಜೇಂದ್ರ, ಚಂದ್ರಪ್ರಸಾದ್, ಜಯಕುಮಾರ್ ಬಾಬು ಪೂಜಾ ವಿಧಾನ ನೆರವೇರಿಸಿದರು. ಹಾಸನ ದಿಗಂಬರ ಜೈನ ಯವಕ ಸಂಘದ ಅಧ್ಯಕ್ಷ ನಾಗರಾಜು ಎಚ್.ಪಿ., ಕಾರ್ಯದರ್ಶಿ ದೇವನಾಗು, ಸದಸ್ಯರಾದ ಅಮೃತ್.ಎ, ಧನುಶ್, ಸಮಂತ್, ಶ್ರೇಯಸ್, ಸನ್ಮತಿ, ಸ್ಥವನ್ ನೇತೃತ್ವದಲ್ಲಿ ಮಸ್ತಕಾಭಿಷೇಕ ನಡೆಯಿತು.

ಪಲ್ಲಕ್ಕಿ ಉತ್ಸವ:

ನಂತರ ತೀರ್ಥಂಕರರ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು. ತೀರ್ಥಂಕರ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಜೈಕಾರದೊಂದಿಗೆ ಆರೋಹಣ ಮಾಡಲಾಯಿತು. ಶ್ರಾವಕ, ಶ್ರಾವಕಿಯರು ಪುಷ್ಪವೃಷ್ಟಿಯೊಂದಿಗೆ ಚಾಮರ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ನೆರೆದಿದ್ದ ಭಕ್ತರು ಭಕ್ತಿಭಾವದಿಂದ ಹೆಜ್ಜೆ ಹಾಕಿದರು.

ಹಾಲಿನ ಅಭಿಷೇಕ
ಶ್ರೀಗಂಧದ ಅಭಿಷೇಕ 
ಚಂದನದ ಅಭಿಷೇಕ 
ಶಾಂತಿನಾಥ ತೀರ್ಥಂಕರರನ್ನು ಪೂಜಿಸಿ ಆರಾಧಿಸುವುದರಿಂದ ಮನಸ್ಸು ಪರಿಶುದ್ದವಾಗುತ್ತದೆ. ಶಾಂತಿಯುತ ಬದುಕು ಸಾಗಿಸುವತ್ತ ಮನಸ್ಸು ಹೊರಳುತ್ತದೆ.
ಪ್ರತಿಷ್ಠಾ ವಿಶಾರದ ಜಿನರಾಜೇಂದ್ರ ಪುರೋಹಿತ
ಪ್ರಾಚೀನ ಕಾಲದಿಂದಲೂ ಬಸ್ತಿಹಳ್ಳಿಯ ಶಾಂತಿನಾಥ ಸ್ವಾಮಿಗೆ ಮಸ್ತಕಾಭಿಷೇಕ ಪೂಜಾ ವಿಧಾನ ನಡೆದುಕೊಂಡು ಬಂದಿದೆ. ಸುತ್ತಮುತ್ತಲಿನ ಸ್ಥಳ ಐತಿಹಾಸಿಕ ಮಹತ್ವ ಹೊಂದಿದೆ.
ಎಂ.ಅಜಿತ್ ಕುಮಾರ್ ಜೈನ ಸಮಾಜದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.