ADVERTISEMENT

ಮಹಾಕಾಳಿ ವಿಗ್ರಹ ಭಗ್ನ: ತನಿಖೆ ಚುರುಕು

ಡಿ ದರ್ಜೆ ನೌಕರ, ಗ್ರಾಮಸ್ಥರಿಂದ ಹೇಳಿಕೆ ಪಡೆದ ಎಸ್‌ಐ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 14:34 IST
Last Updated 22 ನವೆಂಬರ್ 2020, 14:34 IST
ದೊಡ್ಡಗದ್ದವಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಎಸ್ಪಿ ಆರ್‌.ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.
ದೊಡ್ಡಗದ್ದವಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಎಸ್ಪಿ ಆರ್‌.ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.   

ಹಾಸನ: ತಾಲ್ಲೂಕಿನ ದೊಡ್ಡಗದ್ದವಳ್ಳಿ ಮಹಾಲಕ್ಷ್ಮೀ ದೇವಾಲಯದ ಮಹಾಕಾಳಿ ವಿಗ್ರಹ ಭಗ್ನ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಹಾಸನ ಗ್ರಾಮಾಂತರ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಬಿ.ಬಸವರಾಜ ಸ್ಥಳಕ್ಕೆ ಭೇಟಿ ನೀಡಿ, ಸಹಾಯಕ ಸ್ಮಾರಕ
ಸಂರಕ್ಷಣಾಧಿಕಾರಿ ಕಿಶೋರ್‌ ರೆಡ್ಡಿ , ದೇವಾಲಯ ಅರ್ಚಕ ವೆಂಕಟೇಶ್‌, ಡಿ ದರ್ಜೆ ನೌಕರ ಸಣ್ಣೇಗೌಡ ಹಾಗೂ ಗ್ರಾಮಸ್ಥರಿಂದ ಹೇಳಿಕೆ ಪಡೆದರು.

ಕ್ರಿ.ಶ. 1113ರಲ್ಲಿ ನಿರ್ಮಾಣವಾಗಿರುವ ಹೊಯ್ಸಳರ ಕಾಲದ ಮಹಾಲಕ್ಷ್ಮೀ ದೇವಾಲಯಕ್ಕೆ ತನ್ನದೇಯಾದ ಇತಿಹಾಸವಿದೆ. ವ್ಯಾಪಾರಿ ಕಲ್ಲುಹಣರಾಹು ಮತ್ತು ಶಹಬಾದೇವಿ ದಂಪತಿ ದೇವಾಲಯ ನಿರ್ಮಿಸಿದರು ಎನ್ನಲಾಗುತ್ತಿದೆ. ಕೊಲ್ಲಾಪುರದ ಮಹಾಲಕ್ಷ್ಮೀ ದರ್ಶನಕ್ಕೆ ತೆರಳುತ್ತಿದ್ದ ಅವರು ಅದು ಬಹುದೂರದ ದಾರಿಯಾಗಿದ್ದರಿಂದ ಸ್ಥಳೀಯ ಭಕ್ತರಿಗಾಗಿ ದೇಗುಲ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಹೊಯ್ಸಳರು ನಿರ್ಮಿಸಿದ 800 ದೇವಾಲಯಗಳ ಪೈಕಿ ದೊಡ್ಡಗದ್ದವಳ್ಳಿ ದೇಗುಲಕ್ಕೆ ವಿಶೇಷ ಸ್ಥಾನವಿದ್ದು, 16 ಶಾಸನ ಕಾಣಬಹುದು.

ADVERTISEMENT

‘ಪ್ರಾಚೀನ ಕಲೆ ಉಳಿಸಿಕೊಳ್ಳುವಲ್ಲಿ ಪುರಾತತ್ವ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಕಾಯಂ ಭದ್ರತಾ ಸಿಬ್ಬಂದಿ ನೇಮಕ ಮಾಡದಿರುವುದೇ ಕಾರಣ’ ಎಂಬುದು ಸ್ಥಳೀಯರ ಆರೋಪ.

ವಿಗ್ರಹ ಆಸನವಾಗಿದ್ದ ಕೆಳಭಾಗ ಸಂಪೂರ್ಣ ಸೆವೆದು ಏಕಾಏಕಿ ತುಂಡರಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.ದೇವಾಲಯಕ್ಕೆ ಎರಡು ಗೇಟ್‌ಗಳಿದ್ದು ಬೀಗ ಹಾಕಲಾಗಿತ್ತು. ಆದರೆ ಗರ್ಭಗುಡಿ ಬಾಗಿಲು ದುಸ್ಥಿತಿಯಲ್ಲಿದ್ದ ಕಾರಣ ಬೀಗ ಹಾಕಿರಲಿಲ್ಲ.ಈ ದೇಗುಲದಲ್ಲಿ ಐವತ್ತು ವರ್ಷಗಳ ಹಿಂದೆ ಕಾಲಭೈರವೇಶ್ವರ ವಿಗ್ರಹ ಕಳವಾಗಿತ್ತು. ಪೊಲೀಸರ ಶೋಧನೆ ನಡೆಸಿ ಪತ್ತೆ ಮಾಡಿ ಮರಳಿಸಿದ್ದರು.

ಮಹಾಕಾಳಿಗೆ ವಿಗ್ರಹಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದ ಭಕ್ತರು ಮೊಸರು, ಮಜ್ಜಿಗೆ, ಪೂಜಾ ಪದಾರ್ಥಗಳನ್ನು ಹಾಕುತ್ತಿದ್ದರು. ಸ್ವಚ್ಛತೆ ನಿರ್ವಹಣೆ ಮಾಡದಿರುವುದರಿಂದ ಶಿಥಿಲಾವಸ್ಥೆ ತಲುಪಿತ್ತು. ಹೊಯ್ಸಳರ ಕಾಲದ ವಿಗ್ರಹಗಳ ವೈಶಿಷ್ಟ್ಯವೆಂದರೆ ಕೆಳಭಾಗ ವೃತ್ತಾಕಾರದಲ್ಲಿದ್ದು, ಅದನ್ನು ಅಷ್ಟೇ ಅಳತೆಯ ಗುಂಡಿಯೊಳಗೆ ಇಳಿಸಲಾಗುತ್ತದೆ.

‘ಮಹಾಕಾಳಿ ವಿಗ್ರಹ ಕಳವಿಗೆ ಪ್ರಯತ್ನ ನಡೆದಿದೆ ಎನ್ನಲು ಹಾರೆ ಅಥವಾ ಬಲವಾದ ಆಯುಧದ ಯಾವುದೇ ಗುರುತು
ಪತ್ತೆಯಾಗಿಲ್ಲ.ನೂರಾರು ವರ್ಷಗಳ ಹಳೆಯ ದೇವಸ್ಥಾನ ಆಗಿರುವುದರಿಂದ ಶಿಥಿಲಾವಸ್ಥೆಗೆ ತಲುಪಿ ವಿಗ್ರಹ ಬಿದ್ದಿರಬಹುದು. ತನಿಖೆ ಬಳಿಕ ಸತ್ಯ ಗೊತ್ತಾಗಲಿದೆ. ಹೊಸ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಅರ್ಚಕರೊಂದಿಗೆ ಚರ್ಚಿಸಲಾಗುವುದು. ಎರಡು ದಿನಗಳಲ್ಲಿ ಗ್ರಾಮಕ್ಕೆ ಯಾರಾದರೂ ಅಪರಿಚಿತರು ಬಂದಿದ್ದರೆ ಎಂಬುದನ್ನು ತಿಳಿಯಲು ಟವರ್‌ ಡಂಪ್‌ ಮೂಲಕ ಪರಿಶೀಲನೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವ ಕುರಿತು ಕೇಂದ್ರ ಪುರಾತತ್ವ ಇಲಾಖೆಗೆ ಪತ್ರ ಬರೆಯುತ್ತೇನೆ’ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ತಿಳಿಸಿದರು.

‘ಅಷ್ಟ ಬಂಧನ ಮೇಲೆ ನಿಲ್ಲುವ ವಿಗ್ರಹ ತಾನಾಗಿಯೇ ಬಿದ್ದಿದೆ ಎಂದು ಹೇಳಲು ಬರುವುದಿಲ್ಲ. ದೇಶದಲ್ಲಿರುವ ಎಲ್ಲ ವಿಗ್ರಹಗಳು ಈ ವಿಧಾನದಲ್ಲಿಯೇ ಅಸ್ತಿತ್ವ ತಾಳಿವೆ’ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ರಕ್ಷಿತ್ ಭಾರದ್ವಾಜ್‌ ಹೇಳಿದರು.

‘ದೊಡ್ಡಗದ್ದವಳ್ಳಿಯಲ್ಲಿ ಮೊದಲು ಮೂರು ವಾಚ್‌ಮನ್‌ಗಳಿದ್ದರು. ಆದರೆ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇರುವ ಒಬ್ಬಕಾರ್ಮಿಕ ಪಾಳಿ ಕೆಲಸ ಮಾಡಿಮನೆಗೆ ತೆರಳಿದ್ದು, ರಾತ್ರಿ ಅವಘಡ ಸಂಭವಿಸಿದೆ. ಇಲಾಖೆಯ ನಿರ್ಲಕ್ಷ್ಮವೇ ಘಟನೆಗೆಕಾರಣ’ ಎಂದು ಕೇಂದ್ರ ಪುರಾತತ್ವ ಇಲಾಖೆ ಕಾಯಂ ಅಲ್ಲದೆ ಕಾರ್ಮಿಕರ ಸಂಘದ ಅಧ್ಯಕ್ಷ ಧರ್ಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.