ADVERTISEMENT

ಹಳೇಬೀಡು: ತೀರ್ಥಂಕರ ಮೂರ್ತಿಗೆ ಮಸ್ತಕಾಭಿಷೇಕ ಇಂದು

ದಿಗಂಬರ ಜೈನ ಯುವಕರ ಸಂಘದಿಂದ ಆಯೋಜನೆ: ಭರದ ಸಿದ್ಧತೆ

ಎಚ್.ಎಸ್.ಅನಿಲ್ ಕುಮಾರ್
Published 26 ಜನವರಿ 2025, 5:54 IST
Last Updated 26 ಜನವರಿ 2025, 5:54 IST
ಹಳೇಬೀಡಿನ ಬಸ್ತಿಹಳ್ಳಿಯಲ್ಲಿರುವ ಹೊಯ್ಸಳರ ಕಾಲದ ಶಾಂತಿನಾಥ ಜಿನಮಂದಿರ. 
ಹಳೇಬೀಡಿನ ಬಸ್ತಿಹಳ್ಳಿಯಲ್ಲಿರುವ ಹೊಯ್ಸಳರ ಕಾಲದ ಶಾಂತಿನಾಥ ಜಿನಮಂದಿರ.    

ಹಳೇಬೀಡು: ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಇಲ್ಲಿನ ಬಸ್ತಿಹಳ್ಳಿಯ ಜೈನ ಬಸದಿಯಲ್ಲಿರುವ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಜನವರಿ 26ರಂದು ಮಹಾಮಸ್ತಕಾಭಿಷೇಕ ನಡೆಯಲಿದೆ.

ಹಾಸನದ ದಿಗಂಬರ ಜೈನ ಯುವಕರ ಸಂಘವು ಮಸ್ತಕಾಭಿಷೇಕ ಮಹೋತ್ಸವ ಆಯೋಜಿಸಿದೆ. ‘ಶ್ರವಣಬೆಳಗೂಳ ಜೈನಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿಯವರ ಸಲಹೆ, ಮಾರ್ಗದರ್ಶನದಲ್ಲಿ ಪೂಜಾ ವಿಧಾನ ನಡೆಯಲಿದೆ’ ಎಂದು ದಿಗಂಬರ ಜೈನ ಯುವಕ ಸಂಘದ ಅಧ್ಯಕ್ಷ ಎಚ್.ಪಿ. ನಾಗರಾಜು ತಿಳಿಸಿದ್ದಾರೆ.

ಹೊಯ್ಸಳ ಸಾಮ್ರಾಜ್ಯದ ಅವನತಿಯ ನಂತರ ಮೈಸೂರು ಒಡೆಯರ ಕಾಲದಲ್ಲಿಯೂ ಬಸದಿಯ ನಿರ್ವಹಣೆ ಹಾಗೂ ವಿಶೇಷ ಪೂಜೆ ನಡೆಯುತ್ತಿದ್ದವು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಜಿಲ್ಲೆಯ ಜೈನ ಸಂಘ– ಸಂಸ್ಥೆಯವರು ಶಾಂತಿನಾಥ ಸ್ವಾಮಿಯ ಮಸ್ತಕಾಭಿಷೇಕ ನಡೆಸಿಕೊಂಡು ಬಂದಿದ್ದಾರೆ.

ADVERTISEMENT

‘40 ವರ್ಷಗಳ ಹಿಂದೆ ಅನಿವಾರ್ಯ ಕಾರಣದಿಂದ ಮಸ್ತಕಾಭಿಷೇಕ ನಡೆದಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಮುಕ್ತಿಹಳ್ಳಿಯ ಶ್ರಾವಕ ಪಾಯಣ್ಣಶೆಟ್ಟಿ, ಜೈನ ಸಮಾಜದವರನ್ನು ಒಗ್ಗೂಡಿಸಿ, ಸುದೀರ್ಘ ಕಾಲ ವೈಭವದಿಂದ ಮಸ್ತಕಾಭಿಷೇಕ ನಡೆಸಿದ್ದರು. ಅಂದಿನ ಪೂಜಾ ವೈಭವದ ನೆನಪುಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದು’ ಎನ್ನುತ್ತಾರೆ ಭಕ್ತರು.

ಪಾಯಣ್ಣಶೆಟ್ಟರ ಮರಣದ ನಂತರ ಹಾಸನ ಜೈನ ಸಂಘದವರು, ಶಿವಮೊಗ್ಗ ಜಿಲ್ಲೆಯ ಹೊಂಬುಜ ಮಠದ ದೇವೆಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಸ್ತಕಾಭಿಷೇಕ ಮಹೋತ್ಸವ ಮುಂದುವರಿಸಿದರು.

;ಪ್ರತಿವರ್ಷ ವಿವಿಧ ಜೈನ ಮಠದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಸ್ತಕಾಭಿಷೇಕ ನಡೆದುಕೊಂಡು ಬಂದಿದೆ. ಮುಂಬರುವ ವರ್ಷದಿಂದ ಉತ್ಸವಾದಿ ಕಾರ್ಯಕ್ರಮದೊಂದಿಗೆ ಮಸ್ತಕಾಭಿಷೇಕ ವೈಭವ ಹೆಚ್ಚಿಸಬೇಕು ಎಂದು ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಸಕ್ತಿ ವಹಿಸಿದ್ದಾರೆ’ ಎಂದು ಹಾಸನ ಜೈನ ಯುವಕ ಸಂಘ ಪದಾಧಿಕಾರಿ ದೇವನಾಗು ತಿಳಿಸಿದರು.

900 ವರ್ಷಗಳ ಇತಿಹಾಸ

ಶಾಂತಿನಾಥ ಸ್ವಾಮಿ ಮಂದಿರವು 900 ವರ್ಷಗಳಿಂಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. 1196ರಲ್ಲಿ ಬೊಪ್ಪನು ಈ ಮಂದಿರ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. ಗರ್ಭಗುಡಿಯಲ್ಲಿರುವ 18 ಅಡಿ ಎತ್ತರದ ಶಾಂತಿನಾಥ ಸ್ವಾಮಿ ಮೂರ್ತಿಯನ್ನು ಅಂದಿನ ಕಾಲದಲ್ಲಿಯೇ ಪ್ರತಿಷ್ಠಾಪಿಸಲಾಗಿದೆ. ಜೈನ ಧರ್ಮದ 16ನೇ ತೀರ್ಥಂಕರರಾದ ಶಾಂತಿನಾಥ ಸ್ವಾಮಿಯನ್ನು ಹೊಯ್ಸಳರ ದೊರೆ ಬಿಟ್ಟಿದೇವ (ವಿಷ್ಣುವರ್ಧನ)ನ ಪಟ್ಟದರಸಿ ಶಾಂತಲೆ ಭಕ್ತಿಯಿಂದ ಆರಾಧಿಸುತ್ತಿದ್ದಳು ಅಂದಿನ ಕಾಲದಿಂದಲೂ ಮಸ್ತಕಾಭಿಷೇಕ ವಿವಿಧ ಆರಾಧನೆ ಹಾಗೂ ಪೂಜಾ ವಿಧಾನಗಳು ಜಿನ ಮಂದಿರದಲ್ಲಿ ನಡೆದುಕೊಂಡು ಬಂದಿವೆ. ಜಿನ ಮಂದಿರದ ನಿರ್ವಹಣೆಗಾಗಿ ಹೊಯ್ಸಳರ ಕಾಲದಲ್ಲಿಯೇ ಉಂಬಳಿ ಬಿಟ್ಟಿದ್ದರು ಎಂಬುದಾಗಿ ಶಾಸನಗಳಲ್ಲಿ ಉಲ್ಲೇಖವಾಗಿದೆ.

ಹಳೇಬೀಡಿನ ಬಸ್ತಿಹಳ್ಳಿ ಜಿನಮಂದಿರದಲ್ಲಿರುವ ಶಾಂತಿನಾಥ ತೀರ್ಥಂಕರ ಮೂರ್ತಿ.
ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಸಕಲ ಜೀವಿಗಳಿಗಳಿಗೂ ಸುಖ ಶಾಂತಿ ನೆಮ್ಮದಿ ಮುಕ್ತಿ ದೊರಕಲಿ ಎಂಬುದು ಜೈನ ಧರ್ಮದ ಉದ್ದೇಶ. ಪ್ರತಿ ಜೀವಿಗೂ ಒಳಿತಾಗಲಿ ಶಾಂತಿ ನೆಲಸಲಿ ಎಂದು ತೀರ್ಥಂಕರರಿಗೆ ಮಸ್ತಕಾಭಿಷೇಕ ನಡೆಸಲಾಗುವುದು.
-ಎಚ್.ಪಿ.ನಾಗರಾಜು ದಿಗಂಬರ ಜೈನ ಯುವಕ ಸಂಘದ ಅಧ್ಯಕ್ಷ
ಶಾಂತಿನಾಥ ಸ್ವಾಮಿ ಮಸ್ತಕಾಭಿಷೇಕ ಪ್ರತಿವರ್ಷ ವಿಶಿಷ್ಟವಾಗಿ ನಡೆಯುತ್ತದೆ. ವಿವಿಧ ಜಾತಿ ಧರ್ಮದವರು ವೀಕ್ಷಿಸುತ್ತಾರೆ. ಮನಸ್ಸು ಭಕ್ತಿ ಲೋಕಕ್ಕೆ ಹೊರಳುತ್ತದೆ.
-ರತ್ನಮ್ಮ ಪರ್ವತೇಗೌಡ ಬಸ್ತಿಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.