ADVERTISEMENT

ಆಧುನಿಕ ಚಿಕಿತ್ಸೆ ಬಡವರಿಗೂ ಸಿಗುವಂತಾಗಲಿ: ಸಂಸದ ಶ್ರೇಯಸ್‌ ಪಟೇಲ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 15:52 IST
Last Updated 21 ಮಾರ್ಚ್ 2025, 15:52 IST
ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಯುರೋಗೈನೆಕಾಲಜಿ ಸಮಾವೇಶವನ್ನು ಸಂಸದ ಶ್ರೇಯಸ್‌ಪಟೇಲ್ ಉದ್ಘಾಟಿಸಿದರು. ಡಾ. ಧನ್‍ಶೇಖರ್, ಡಾ ಲಕ್ಷ್ಮೀಕಾಂತ್, ಡಾ. ಚಂದ್ರಶೇಖರ್ ಮೂರ್ತಿ ಇತರರು ಭಾಗವಹಿಸಿದ್ದರು.
ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಯುರೋಗೈನೆಕಾಲಜಿ ಸಮಾವೇಶವನ್ನು ಸಂಸದ ಶ್ರೇಯಸ್‌ಪಟೇಲ್ ಉದ್ಘಾಟಿಸಿದರು. ಡಾ. ಧನ್‍ಶೇಖರ್, ಡಾ ಲಕ್ಷ್ಮೀಕಾಂತ್, ಡಾ. ಚಂದ್ರಶೇಖರ್ ಮೂರ್ತಿ ಇತರರು ಭಾಗವಹಿಸಿದ್ದರು.   

ಹೊಳೆನರಸೀಪುರ: ಸರ್ಕಾರಿ ಆಸ್ಪತ್ರೆಗೆ ಬಡವರು ಹಾಗೂ ಗ್ರಾಮೀಣ ಪ್ರದೇಶದ ಜನರೇ ಹೆಚ್ಚಾಗಿ ಬರುತ್ತಾರೆ. ವೈದ್ಯರು ಅವರಿಗೆ ಆಸ್ಪತ್ರೆಯಲ್ಲಿ ಉತ್ತಮ ಹಾಗೂ ಆಧುನಿಕ ಚಿಕಿತ್ಸೆ ನೀಡಿ ಅವರ ನೋವಿಗೆ ಸ್ಪಂದಿಸಿ ಎಂದು ಸಂಸದ ಶ್ರೇಯಸ್ ಪಟೇಲ್ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಯೂರೋಗೈನೆಕಾಲಜಿ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಕ್ಯಾನ್ಸರ್‌ನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಅಗತ್ಯ ಸಲಹೆ, ಸೂಚನೆ, ಚಿಕಿತ್ಸೆ, ನೀಡಿ ಅವರಲ್ಲಿ ಭರವಸೆ ಮೂಡಿಸಿ ಎಂದರು.

ಗರ್ಭಕಂಠ ಕ್ಯಾನ್ಸರ್ ತಡೆಗೆ ಲಸಿಕೆ ಹಾಕುವ ಬಗ್ಗೆ ಇನ್ಫೊಸಿಸ್‍ನ ಸುಧಾಮೂರ್ತಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಎಲ್ಲ ವೈದ್ಯರ ಸಹಕಾರದಿಂದ ಹಳ್ಳಿಯ ಜನರ ಆರೋಗ್ಯ ಸುಧಾರಣೆಗೆ ಗಮನ ಹರಿಸೋಣ. ನಗರ ಪ್ರದೇಶದ ಬಹುತೇಕ ಮಹಿಳೆಯರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಹಳ್ಳಿಯ ಮುಗ್ಧ ಮಹಿಳೆಯರಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ, ಅಗತ್ಯ ಚಿಕಿತ್ಸೆ ನೀಡಿ ಗುಣ ಪಡಿಸುವುದು ನಿಮ್ಮ ಕರ್ತವ್ಯ. ಸಹಕಾರ ನೀಡುವುದು ನಮ್ಮ ಜವಾಬ್ದಾರಿ ಎಂದರು.

ADVERTISEMENT

ತಾಲೂಕು ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ಇಲ್ಲದೇ ಲ್ಯಾಪ್ರೋಸ್ಕೋಪಿ ವಿಧಾನದಿಂದ ಚಿಕಿತ್ಸೆ ನೀಡುವ ವ್ಯವಸ್ಥೆ ಪರಿಚಯಿಸಲು ಪ್ರಾಯೋಗಿಕವಾದ ಕಾರ್ಯಾಗಾರ ನಡೆಸಿ ಗಮನ ಸೆಳೆದಿದ್ದೀರಿ. ಇದರ ಉಪಯೋಗವನ್ನು ಹೆಚ್ಚು ಜನ ಪಡೆದುಕೊಳ್ಳುವಂತಾಗಲಿ ಎಂದು ಆಶಿಸಿದರು.

ಬೆಂಗಳೂರಿನ ಇಎಸ್‍ಐ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಚಂದ್ರಶೇಖರ್‌ ಮೂರ್ತಿ ಮಾತನಾಡಿ, ಯೂರೋಗೈನೆಕಾಲಜಿ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಲಾಗುತ್ತಿತ್ತು. ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಅತಿಯಾದ ನೋವಿನಿಂದ ಬಳಲುತ್ತಿದ್ದರು. ಇತ್ತೀಚೆಗೆ ಯೂರೋಗೈನೆಕಾಲಜಿ ಸಮಸ್ಯೆಗಳಲ್ಲಿ ಒಂದಾದ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಲ್ಯಾಪ್ರೋಸ್ಕೋಪ್‌ ತಂತ್ರಜ್ಞಾನದಿಂದ ತೆಗೆಯಲಾಗುತ್ತಿದೆ. ಒಂದೇ ದಿನದಲ್ಲಿ ಮನೆಗೆ ಕಳುಹಿಸಬಹುದಾದ ಸುಲಭ ಚಿಕಿತ್ಸೆ ಇದಾಗಿದೆ. ಈ ಬಗ್ಗೆ ಇಂದಿನ ಸಮಾವೇಶದಲ್ಲಿ ಸ್ತ್ರೀ ರೋಗ ತಜ್ಞರಿಗೆ ಪ್ರಾಯೋಗಿಕವಾಗಿ ತೋರಿಸಲಾಗಿದೆ ಎಂದು ತಿಳಿಸಿದರು.

ಒಂದು ದೊಡ್ಡ ಹಾಗೂ ಉಪಯುಕ್ತ ಪ್ರಾಯೋಗಿಕ ಕಾರ್ಯಾಗಾರ ನಡೆಸಲು ಎಲ್ಲ ವ್ಯವಸ್ಥೆ ಹೊಂದಿರುವ ನಿಮ್ಮೂರಿನ ಆಸ್ಪತ್ರೆಯ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದರು.

ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾಗಿದ್ದ ಡಾ ಲಕ್ಷ್ಮೀಕಾಂತ್, ಸರ್ಕಾರಿ ಆಸ್ಪತ್ರೆ ವ್ಯದ್ಯಾಧಿಕಾರಿ ಡಾ.ಧನಶೇಖರ್, ಡಾ. ಗಿರಿಜಾ, ಡಾ. ಭಾರತಿ ಚಂದ್ರಶೇಖರ್, ಡಾ. ಸೋಮೇಗೌಡ, ನಿರ್ಮಲಾ ದೊರೆಸ್ವಾಮಿ, ಡಾ ಭವಾನಿ ವಿನಯ್, ಡಾ ಚಂತನಾ, ಡಾ. ಭವ್ಯಾ, ಡಾ. ಲೋಕೇಶ್, ಡಾ. ರವಿಶಂಕರ್ ಇತರರು ಭಾಗವಹಿಸಿದ್ದರು.

ರಾಜ್ಯದಲ್ಲಿ 50 ಕಾರ್ಯಾಗಾರ ಆಯೋಜನೆ: ನೂರಾರು ವೈದ್ಯರು ತರಬೇತಿ‌ 8 ಕ್ಲಿಷ್ಟಕರ ಶಸ್ತ್ರಚಿಕಿತ್ಸೆ: ಆನ್‍ಲೈನ್ ಮೂಲಕ ವೈದ್ಯರಿಗೆ ನೇರ ಪ್ರಸಾರ ಗರ್ಭಕಂಠ ಕ್ಯಾನ್ಸರ್ ತಡೆಗೆ ಲಸಿಕೆ: ಸುಧಾಮೂರ್ತಿ ಸಹಕಾರದ ಭರವಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.