
ಹೊಳೆನರಸೀಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಭಯ ದೂರವಾಗಿತ್ತು. ಗೊಂದಲಗಳನ್ನು ಕೇಳಿ ಪರಿಹರಿಸಿಕೊಂಡ ವಿದ್ಯಾರ್ಥಿಗಳು, ಅಂಕ ಗಳಿಸುವ ಬಗೆ ಹೇಗೆ ಎನ್ನುವುದನ್ನೂ ಕಲಿತರು. ಸುಲಭದಲ್ಲಿ ಪಾಠಗಳನ್ನು ಅರ್ಥೈಸಿಕೊಳ್ಳುವ ಕಲೆಯನ್ನು ಕಲೆತರು. ಪರೀಕ್ಷೆ ಎದುರಿಸುವ ಆತಂಕದಲ್ಲಿ ಬಂದಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು. ಪರೀಕ್ಷೆವನ್ನು ನಿರಾಂತಕವಾಗಿ ಬರೆಯಲು ಪ್ರೇರಣೆಯಾಯಿತು.
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’, ಸ್ವರ್ಣ ವಿದ್ಯಾ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಹಯೋಗದಲ್ಲಿ ಬುಧವಾರ ಇಲ್ಲಿನ ಸ್ವರ್ಣ ವಿದ್ಯಾ ಸಂಸ್ಥೆಯಲ್ಲಿ ತಾಲ್ಲೂಕಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರೇರಣಾ ಕಾರ್ಯಾಗಾರದಲ್ಲಿ ಕಂಡು ಬಂದ ದೃಶ್ಯಗಳಿವು.
ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತನ್ಮಯರಾಗಿ ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ಆಲಿಸಿದರು. ಅವರು ಕೊಡುವ ಟಿಪ್ಸ್‌ಗಳನ್ನು ಬರೆದುಕೊಂಡರು. ಅಂಕ ಗಳಿಸಲು ಮಾಡಬೇಕಿರುವ ಕಾರ್ಯಗಳನ್ನು ತಿಳಿದುಕೊಂಡರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ‘ಶಿಸ್ತು, ಏಕಾಗ್ರತೆ, ಪರಿಶ್ರಮ, ಸ್ಪಷ್ಟ ಗುರಿಯನ್ನು ಇಟ್ಟುಕೊಂಡವರು, ಅಂದುಕೊಂಡ ಗುರಿ ಮುಟ್ಟುತ್ತಾರೆ. ಉನ್ನತ ವಿದ್ಯಾಭ್ಯಾಸ ಸಾಧಕರ ಸ್ವತ್ತಾಗುತ್ತದೆಯೇ ವಿನಾ ಸೋಮಾರಿಗಳ ಸ್ವತ್ತಾಗುವುದಿಲ್ಲ. ನಿಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಚೆನ್ನಾಗಿ ಕಲಿತರೆ, ಮುಂದಿನ ಜೀವನ ಸುಖವಾಗಿರುತ್ತದೆ. ವಿದ್ಯಾಭ್ಯಾಸದ ಅವಧಿಯಲ್ಲಿ ಕಾಲಹರಣ ಮಾಡಿದರೆ, ಜೀವನ ಕಷ್ಟವಾಗಿರುತ್ತದೆ. ಉತ್ತಮವಾಗಿ ಓದಿ ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಮುನಿರಾಜು ಮಾತನಾಡಿ, ‘ನಿಮ್ಮ ಅಪ್ಪ– ಅಮ್ಮನ ಕೈಗಳು ಕೊಳಕಾಗಿ ಒರಟಾಗಿರುತ್ತದೆ. ಬಟ್ಟೆಗಳು ಕೊಳಕಾಗಿರುತ್ತದೆ. ನಿಮ್ಮ ಕೈಗಳು ಮೃದುವಾಗಿರುತ್ತದೆ. ನಿಮ್ಮ ಬಟ್ಟೆಗಳು ಶುದ್ದವಾಗಿರುತ್ತದೆ. ಇದಕ್ಕೆ ಕಾರಣ ನಿಮ್ಮ ಅಪ್ಪ– ಅಮ್ಮನ ದುಡಿಮೆ. ಪ್ರತಿಯೊಬ್ಬರ ಪೋಷಕರು ನಮ್ಮ ಮಕ್ಕಳು ಮುಂದೆ ಒಳ್ಳೆಯ ಬದುಕು ಕಟ್ಟಿಕೊಳ್ಳಲಿ ಎನ್ನುವ ಒಳ್ಳೆಯ ಉದ್ದೇಶದಿಂದ, ಏನೇ ತೊಂದರೆ ಎದುರಾದರೂ, ನಿಮ್ಮನ್ನು ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ. ನಾನು ನನ್ನ ಮಕ್ಕಳನ್ನು ಓದಿಸಿದ್ದಕ್ಕೂ ಸಾರ್ಥಕವಾಯಿತು ಎನ್ನುವಂತಹ ವಿದ್ಯಾಭ್ಯಾಸ ಮಾಡಿ. ಪೋಷಕರನ್ನು ಸುಖವಾಗಿಡಲು ಇಂದು ನೀವು ಉತ್ತಮವಾಗಿ ಓದಿ’ ಎಂದರು.
‘ಡೆಕ್ಕನ್ ಹೆರಾಲ್ಡ್’ ಮೈಸೂರು ಬ್ಯೂರೊ ಮುಖ್ಯಸ್ಥ ಟಿ.ಆರ್. ಸತೀಶ್‌ಕುಮಾರ್ ಮಾತನಾಡಿ, 1948 ರಿಂದ ಓದುಗರ ವಿಶ್ವಾಸಕ್ಕೆ ಪಾತ್ರವಾಗಿರುವ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಸುದ್ದಿಯ ಜೊತೆಗೆ ವಿದ್ಯಾರ್ಥಿಗಳಿಗೆ ಅಗತ್ಯವಾದ ತರಬೇತಿ, ಮಾಹಿತಿ, ಮಾರ್ಗದರ್ಶನಗಳನ್ನು ಪತ್ರಿಕೆಯಲ್ಲಿ ನಿರಂತರ ನೀಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದಿ ಐಎಎಸ್, ಐಪಿಎಸ್ ಉತ್ತೀರ್ಣರಾಗಿದ್ದಾರೆ. ನೀವೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ್, ವಿವಿಧ ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಸ್ವರ್ಣ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶೋಭಾ ಬಾಲಕೃಷ್ಣ ಸ್ವಾಗತಿಸಿದರು. ಶಾಲೆಯ ಶಿಕ್ಷಕ ಮಂಜೇಶ್ ನಿರೂಪಿಸಿದರು. ಪಟ್ಟಣದ ಗ್ರೀನ್‌ವುಡ್, ಎಸ್ಎಲ್ಎನ್, ವಾಸವಿ, ಶಾಲೆಗಳು ಸೇರಿದಂತೆ ಪಟ್ಟಣದ ಖಾಸಗಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು.
ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಆಯೋಜಿಸಿದ್ದ ಪ್ರೇರಣಾ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಓದುವ ರೀತಿ ಮನನ ಮಾಡಿಕೊಳ್ಳುವ ರೀತಿ ಜ್ಞಾಪಕದಲ್ಲಿ ಇಟ್ಟುಕೊಳ್ಳುವ ರೀತಿಯನ್ನು ಅತ್ಯಂತ ಆಸಕ್ತಿದಾಯಕವಾಗಿ ತಿಳಿಸಲಾಯಿತು. ಇಂತಹ ತರಬೇತಿ ಎಲ್ಲ ಮಕ್ಕಳಿಗೂ ಅವಶ್ಯಕ.ಶೋಭಾ ಬಾಲಕೃಷ್ಣ. ಸ್ವರ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ
ವಿದ್ಯಾರ್ಥಿಗಳ ಸಾಮರ್ಥ್ಯ ಮನವರಿಕೆ ಮಾಡಬೇಕು
ಯಾವುದೇ ವಿದ್ಯಾರ್ಥಿಗಳು ದಡ್ಡರಲ್ಲ. ಅವರಿಗೆ ವಿದ್ಯಾಭ್ಯಾಸ ಹೊರೆ ಎನಿಸುವಂಥ ವಾತಾವರಣ ಇರಬಾರದು. ಅವರಲ್ಲಿ ಇರುವ ಸಾಮರ್ಥ್ಯವನ್ನು ಅವರಿಗೆ ಸರಿಯಾಗಿ ಮನದಟ್ಟು ಮಾಡಿಕೊಡಬೇಕು. ಓದುವಾಗ ಅನುಸರಿಸುವ ಹಾಗೂ ಪಾಲಿಸಬೇಕಾದ ಮುಂಜಾಗೃತೆ ಬಗ್ಗೆ ತಿಳಿಸಿಕೊಟ್ಟಿದ್ದೇನೆ ಎಂದು ಜೆ.ಸಿ. ಸಂಸ್ಥೆಯ ರಾಷ್ಟ್ರೀಯ ತರಬೇತುದಾರ ಎನ್.ಸಿ.ಪಾಂಡುರಂಗ ಹೇಳಿದರು.
ವಿದ್ಯಾರ್ಥಿಗಳಿಗೆ ಉತ್ತಮ ಸಾಮರ್ಥ್ಯ ಇದೆ. ಅದನ್ನು ಬಳಸಿಕೊಳ್ಳಲು ಬರುತ್ತಿಲ್ಲ. ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್‘ ಪದ್ಯವನ್ನು ನೀವು ಚಿಕ್ಕವರಿದ್ದಾಗ ಕಲಿತಿದ್ದು. ಈಗ ಕೇಳಿದ ತಕ್ಷಣ ತಪ್ಪಿಲ್ಲದೇ ಹೇಳಿದಿರಿ. ಇದರಿಂದ ನಿಮ್ಮ ಜ್ಞಾಪಕ ಶಕ್ತಿ ಚೆನ್ನಾಗಿದೆ ಎಂಬುದು ಅರ್ಥವಾಗುತ್ತದೆ. ಪ್ರಾಥಮಿಕ ಶಾಲೆಯ ಪದ್ಯವನ್ನು ಬಿಡುವಾದಾಗೆಲ್ಲಾ ಹೇಳಿಕೊಂಡಿದ್ದರಿಂದ ಇಂದಿಗೂ ನಿಮಗೆ ಜ್ಞಾಪಕ ಇದೆ.
ಇದೇ ರೀತಿ ನೀವು ಇಂದಿನ ಪಠ್ಯಗಳನ್ನು ಓದಿ ಆಗಾಗ ಮನನ ಮಾಡಿಕೊಂಡರೆ ಪರೀಕ್ಷೆ ಸಮಯದಲ್ಲಿ ಮರೆತುಹೋಗುವುದಿಲ್ಲ ಎಂದು ತಿಳಿಸಿದರು. ಪರೀಕ್ಷೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಬದ್ಧತೆಯಿಂದ ಓದಲು ಯಾವ ತಂತ್ರಗಳನ್ನು ಬಳಸಬೇಕು ಓದಿರುವುದು ಸದಾಕಾಲ ಜ್ಞಾಪಕದಲ್ಲಿ ಇಟ್ಟಿಕೊಳ್ಳಲು ಏನು ಮಾಡಬೇಕು ಎಂದು ಪ್ರಯೋಗಗಳ ಮೂಲಕ ತಿಳಿಸಿದ ಅವರು ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು.