ADVERTISEMENT

ಹಳೇಬೀಡು: ಮಕ್ಕಳ ಜ್ಞಾನಾರ್ಜನೆಗೆ ‘ಮಳೆಬಿಲ್ಲು ಹಬ್ಬ’

ಕಲೆ, ಸಂಸ್ಕೃತಿ, ವಿಜ್ಞಾನ, ಇತಿಹಾಸದ ಮಾಹಿತಿ ಪಡೆದ ವಿದ್ಯಾರ್ಥಿಗಳು; ನಾಟಕ ರಚಿಸಿ ಅಭಿನಯಿಸಿದ ಮಕ್ಕಳು

ಎಚ್.ಎಸ್.ಅನಿಲ್ ಕುಮಾರ್
Published 29 ಜೂನ್ 2022, 3:01 IST
Last Updated 29 ಜೂನ್ 2022, 3:01 IST
ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ನಡೆದ ಮಳೆಬಿಲ್ಲು ಮಕ್ಕಳ ಹಬ್ಬದಲ್ಲಿ ವಿವಿಧ ಖಾದ್ಯಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿನಿಯರು
ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ನಡೆದ ಮಳೆಬಿಲ್ಲು ಮಕ್ಕಳ ಹಬ್ಬದಲ್ಲಿ ವಿವಿಧ ಖಾದ್ಯಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿನಿಯರು   

ಹಳೇಬೀಡು: ರಜೆಯಿಂದ ಶಾಲೆಗೆ ಮರಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಮುದ ನೀಡುವ ಹಾಗೂ ಕಲಿಕೆ ಆರಂಭಿಸುವ ಮೊದಲು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಉಂಟು ಮಾಡುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡ 14 ದಿನಗಳ ‘ಮಳೆಬಿಲ್ಲು ಮಕ್ಕಳ ಹಬ್ಬ’ ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.

ವಿದ್ಯಾರ್ಥಿಗಳು ಕಲೆ, ಸಂಸ್ಕೃತಿ, ವಿಜ್ಞಾನದ ಬೆಳವಣಿಗೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಪಡೆದರು. ಸಾಹಿತ್ಯದ ಕುರಿತು ಮಕ್ಕಳು ವಿಚಾರ ವಿನಿಮಯ ಮಾಡಿಕೊಂಡರು. ಜನಪದ, ಶಾಸ್ತ್ರಿಯ, ಸುಗಮ ಸಂಗೀತದ ಜ್ಞಾನ ಪಡೆದರು. ವಿದ್ಯಾರ್ಥಿಗಳೇ ಸ್ವತಃ ನಾಟಕ ರಚಿಸಿ ಅಭಿನಯಿಸಿ ಗಮನ ಸೆಳೆದರು.

ಆದಿ ಮಾನವರು ಕಲ್ಲಿನಿಂದ ಬೆಂಕಿ ಹಚ್ಚುತ್ತಿದ್ದ ಕಾಲಘಟ್ಟದಿಂದ ಆಧುನಿಕ ಯುಗದಲ್ಲಿ ಅಡುಗೆ ಅನಿಲ, ವಿದ್ಯುತ್ ಹಾಗೂ ಸೌರಶಕ್ತಿ ಬಳಸಿ ಅಡುಗೆ ತಯಾರಿಸುವ ಕುರಿತು ಪ್ರಾಯೋಗಿಕವಾಗಿ ತಿಳಿದುಕೊಂಡರು.

ADVERTISEMENT

ಸೇರು, ಪಾವು ಚಟಾಕು, ತಕ್ಕಡಿ ಬಟ್ಟು, ಹಳೆಯ ನಾಣ್ಯ, ಮಣ್ಣು ಹಾಗೂ ಕಲ್ಲಿನ ಪಾತ್ರೆಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಿ ತಂದು ಪ್ರದರ್ಶಿಸಿದರು. ಹಳೆಯ ಪಾತ್ರೆಗಳು, ಗ್ರಂಥಗಳು, ಪತ್ರಗಳು, ಸ್ಟಾಂಪ್‌ಗಳನ್ನೂ ಸಂಗ್ರಹಿಸಿದ್ದರು. ಅವುಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.

ಆಟದ ಹಬ್ಬ, ಆಟಿಕೆ ಮೇಳ, ನಾಟಕದ ಹಬ್ಬ, ಚಿತ್ರ ಚಿತ್ತಾರ, ಚಿತ್ರಗಳ ಮುಖಾಂತರ ಭಾವನೆ ಹಾಗೂ ಸೃಜನಶೀಲತೆ, ಕಥೆ ಹೇಳುವುದು, ಕವನ ವಾಚನ, ಪರಿಸರದಿಂದ ನಿಸರ್ಗದೆಡೆ ನಮ್ಮ ನಡಿಗೆ, ವಿನೋದದ ಲೆಕ್ಕ, ಸರಳವಾಗಿ ಗಣಿತ ಬಿಡಿಸುವುದು, ಗತಕಾಲದ ನೆನಪಿನೊಂದಿಗೆ ಇತಿಹಾಸದ ಹಬ್ಬ, ಅಡುಗೆ ಮನೆಯಲ್ಲಿನ ವೈಜ್ಞಾನಿಕ ತತ್ವಗಳ ಕಲಿಕೆ, ವಿವಿಧ ಸಾಂಸ್ಕೃತಿಕ ಚಟುವಟಿಕೆ, ಶಾಲೆಗೆ ಸಿಂಗಾರ ಕಾರ್ಯಕ್ರಮಗಳು ನಡೆದವು. ಮಕ್ಕಳು ಎಲ್ಲ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

***

ಬೇಲೂರು ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಮಳೆಬಿಲ್ಲು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಅನುಕೂಲವಾಯಿತು.

-ಎಸ್.ಆರ್.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ

***

ಮಕ್ಕಳು ಮಳೆಬಿಲ್ಲು ಕಾರ್ಯಕ್ರಮದ ಪ್ರತಿ ಚಟುವಟಿಕೆಯಲ್ಲಿಯೂ ಸಂಭ್ರಮ ದಿಂದ ಪಾಲ್ಗೊಂಡರು. ಅನೇಕ ವಿಚಾರಗಳ ಬಗ್ಗೆ ಮಾಹಿತಿ ಪಡೆದರು.

-ಬಿ.ಎಂ.ನಾಗರಾಜು, ಮುಖ್ಯಶಿಕ್ಷಕ, ಕೆಪಿಎಸ್ ಶಾಲೆ

***

ಮಳೆಬಿಲ್ಲು ಹಬ್ಬದಿಂದ ಜ್ಞಾನ ಸಂಪಾದನೆ ಸಾಧ್ಯವಾಯಿತು. ಪಠ್ಯದ ಜತೆಗೆ ಸಾಮಾನ್ಯ ಜ್ಞಾನ ವೃದ್ಧಿಗೆ ಇದು ಸಹಕಾರಿ.

-ಸಂಜನಾ, ವಿದ್ಯಾರ್ಥಿನಿ, ಕೆಪಿಎಸ್ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.