ADVERTISEMENT

ಪ್ರಕೃತಿ ಇಲ್ಲದೆ ಮನುಷ್ಯ ಬದುಕಲಾರ

ಮೊರಾರ್ಜಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಜುಲೈ 2018, 14:22 IST
Last Updated 2 ಜುಲೈ 2018, 14:22 IST
ಹಾಸನ ತಾಲ್ಲೂಕಿನ ಎಂ.ಡಿ.ಹೊಸೂರಿನ ಮೊರಾರ್ಜಿ ಶಾಲೆಯಲ್ಲಿ ಸಸಿಗಳನ್ನು ನೆಡಲಾಯಿತು.
ಹಾಸನ ತಾಲ್ಲೂಕಿನ ಎಂ.ಡಿ.ಹೊಸೂರಿನ ಮೊರಾರ್ಜಿ ಶಾಲೆಯಲ್ಲಿ ಸಸಿಗಳನ್ನು ನೆಡಲಾಯಿತು.   

ಹಾಸನ: ಮನುಷ್ಯನಿಲ್ಲದೆ ಮರ ಬದುಕಬಹುದು. ಆದರೆ ಪ್ರಕೃತಿಯಿಲ್ಲದೆ ಮನುಷ್ಯ ಬದುಕಲಾರ ಎಂದು ಮೊರಾರ್ಜಿ ಶಾಲೆಯ ಹಿರಿಯ ಶಿಕ್ಷಕ ಧರ್ಮ ಹೇಳಿದರು.

ತಾಲ್ಲೂಕಿನ ಎಂ.ಡಿ.ಹೊಸೂರಿನ ಮೊರಾರ್ಜಿ ಶಾಲೆ ಆವರಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ದುದ್ದ ಆರ್ ಎಸ್‌ ಸ್ಕೌಟ್ಸ್‌ ಗೈಡ್ಸ್‌ ಘಟಕ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಿಡ, ಮರ ಇದ್ದರೆ ಶುದ್ಧ ಗಾಳಿ ಸಿಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡು ನಾಶ ಮಾಡಬಾರದು. ಒಂದು ಮರ ಕಡಿದರೆ ಹತ್ತು ಸಸಿ ನೆಡಬೇಕು. ಆದ್ದರಿಂದ ಎಲ್ಲರೂ ಪ್ರಕೃತಿಯ ಸಂರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ದುದ್ದ ಶಾಲೆ ಸಿಬ್ಬಂದಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ನುಡಿದರು.

ಸಾಹಿತಿ ಉದಯ ರವಿ ಮಾತನಾಡಿ, ಗಿಡ, ಮರಗಳು ಕೇವಲ ಹಸಿರಲ್ಲ, ಸಕಲ ಜೀವರಾಶಿಗೆ ಉಸಿರು ನೀಡುವ ಸಂಜೀವಿನಿ ಇದ್ದಂತೆ. ವಾತಾವರಣದಲ್ಲಿ ವಾಯುಮಾಲಿನ್ಯ ತಡೆಗಟ್ಟಿ, ಭೂಮಿಯಲ್ಲಿ ನೀರು ಹಿಡಿದಿಡುವ ಮಳೆಯನ್ನು ಭೂಮಿಗೆ ಆಕರ್ಷಿಸುವ ಕೆಲಸ ಮಾಡುವುದರಿಂದ ಹೆಚ್ಚು ಗಿಡ ನೆಟ್ಟು ಪರಿಸರ ಸಂರಕ್ಷಿಸಬೇಕು ಎಂದು ಕರೆ ನೀಡಿದರು.

ADVERTISEMENT

ಮಾನವನ ದುರಾಸೆಯಿಂದ ಆಗಿರುವ ಮಾಲಿನ್ಯ ತಡೆಗಟ್ಟಿ ಜೀವಿಗಳ ಉಳಿವಿಗೆ ಪರಿಸರ ಸಂರಕ್ಷಿಸಬೇಕು. ಆಮ್ಲಜನಕ ಶುದ್ಧೀಕರಿಸಲು ಪರಿಸರ ಸಂರಕ್ಷಿಸುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು. ಸಾಮಾಜಿಕ ಕಾರ್ಯಕರ್ತೆ ಕೆ.ಟಿ.ಜಯಶ್ರೀ ಮಾತನಾಡಿ, ಜೀವಿಗಳ ಉಳಿವು ಆರೋಗ್ಯ ಪರಿಸರದಿಂದ ಮಾತ್ರ ಸಾಧ್ಯ, ಕೇವಲ ಸಸಿ ನೆಟ್ಟರೆ ಸಾಲದು ಅದಕ್ಕೆ ನೀರು ಹಾಕಿ ಬೆಳೆಸಬೇಕು. ಮಕ್ಕಳಿಲ್ಲದ ಸಾಲು ಮರದ ತಿಮ್ಮಕ್ಕ ಸಸಿಗಳನ್ನು ನೆಟ್ಟು ಮಕ್ಕಳಂತೆ ಬೆಳೆಸಿದರು. ಪ್ರತಿಯೊಬ್ಬರು ವಾಸಿಸುವ ಸುತ್ತಮುತ್ತ ಸಸಿ ನೆಡಬೇಕು ಎಂದು ತಿಳಿಸಿದರು.

ದುದ್ದ ಆರ್ ಎಸ್ ಸ್ಕೌಟ್ಸ್, ಗೈಡ್ಸ್ ಘಟಕದ ಎಂ. ಎಸ್. ಪ್ರಕಾಶ್ ಮಾತನಾಡಿದರು. ಹಿರಿಯ ಶಿಕ್ಷಕಿ ಬಿ. ಎಸ್. ವನಜಾಕ್ಷಿ ನಿರೂಪಿಸಿದರು. ಸ್ಕೌಟ್‌ ಮಾಸ್ಟರ್‌ ರಮೇಶ್, ಜಗದೀಶ್, ಆರ್. ಜಿ. ಗಿರೀಶ್ ಇದ್ದರು. ಎಂ. ಎಸ್. ಪ್ರಕಾಶ್ ಆಶಯ ನುಡಿಗಳಾನಾಡಿದರು. ಕೊಟ್ರೇಶ್ ಉಪ್ಪಾರ್‌ ವಂದಿಸಿದರು. ನಂತರ ಶಾಲಾ ಆವರಣದಲ್ಲಿ 150 ಸಸಿಗಳನ್ನು ನೆಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.