ADVERTISEMENT

ಕಾಂಗ್ರೆಸ್‌ನಲ್ಲಿ ಎ.ಮಂಜು ಹಳಸಿರುವ ಅನ್ನ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್‌

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 12:35 IST
Last Updated 11 ಮಾರ್ಚ್ 2019, 12:35 IST
ಎ.ಮಂಜು
ಎ.ಮಂಜು   

ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ಮುಖಂಡ ಎ.ಮಂಜು ಅವರು ಬಿಜೆಪಿ ಅಭ್ಯರ್ಥಿ ಆಗುವ ಆಸೆಗೆ ಆರಂಭದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಸುದ್ದಿಗೋಷ್ಟಿ ನಡೆಸಿದ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್ ಹಾಗೂ ಇತರೆ ಮುಖಂಡರು, ‘ಕಾಂಗ್ರೆಸ್ ನಲ್ಲಿ ಎ.ಮಂಜು ಹಳಸಿರುವ ಅನ್ನ. ಈ ಹಿಂದೆ ಅವರು ಬಿಜೆಪಿಯನ್ನು ಹಾಳು ಮಾಡಿ ಹೋಗಿದ್ದಾರೆ. ಅವರ ಬದಲಿಗೆ ಸ್ಥಳೀಯರಿಗೇ ಅವಕಾಶ ಕೊಡುವಂತೆ’ ಎಂದು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಒತ್ತಾಯಿಸಿದರು.

‘ಹಿಂದೆ ಕಾಂಗ್ರೆಸ್ ನಲ್ಲಿದ್ದು ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಿಲ್ಲ. ಆರಂಭದಲ್ಲಿ ಬಿಜೆಪಿಯಲ್ಲಿದ್ದು ನಂತರ ಪಕ್ಷ ಹಾಳು ಮಾಡಿ, ಕಾಂಗ್ರೆಸ್ ಗೆ ಹೋದರು. ಈಗ ಆ ಪಕ್ಷವನ್ನೂ ಹಾಸನದಲ್ಲಿ ದಯನೀಯ ಸ್ಥಿತಿಗೆ ತಂದಿದ್ದಾರೆ’ ಎಂದು ಕಿಡಿ ಕಾರಿದರು.

ADVERTISEMENT

ಜಿಲ್ಲಾ ಬಿಜೆಪಿ ಘಟಕ ವಿರೋಧ ಮಾಡಿದ ಕೆಲವೇ ಹೊತ್ತಿನಲ್ಲಿ ಹಾಸನದಲ್ಲಿ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ, ಪೂಜೆ
ಸಲ್ಲಿಸಿದ ಬಳಿಕ ಮಾತನಾಡಿದ ಮಂಜು, ‘ಮೂರು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಚರ್ಚಿಸಿದ್ದು ನಿಜ. ಕಾರ್ಯಕರ್ತರು, ಹಿತೈಶಿಗಳು, ಸ್ನೇಹಿತರ ಜತೆ ಚರ್ಚಿಸಿ ಎರಡು ದಿನದಲ್ಲಿ ನಿರ್ಧಾರ ತಿಳಿಸುವೆ’ ಎನ್ನುವ ಮೂಲಕ ಮಂಜು ಬಿಜೆಪಿ ಸೇರುವ ಸುಳಿವು ನೀಡಿದರು.

‘ದೇವೇಗೌಡರು ಅವರ ಮೊಮ್ಮಗನಿಗೆ ಅವಕಾಶ ಕೊಡುವುದರ ಬದಲು ನನಗೆ ಒಂದು ಅವಕಾಶ ನೀಡಲಿ. ಈ ಹಿಂದೆ ಗೌಡರಿಗೆ ನಾನು ಸಹಕಾರ ನೀಡಿದ್ದನ್ನು ನೆನಪಿಸಿಕೊಳ್ಳಬೇಕು. ದೇವೇಗೌಡರೇ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಬೆಂಬಲಿಸುವೆ. ಆದರೆ ಪ್ರಜ್ವಲ್ ಸ್ಪರ್ಧಿಸಿದರೆ ನನ್ನ ವಿರೋಧವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.