ADVERTISEMENT

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ; ಎಬಿವಿಪಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ

ಪೂರ್ಣ ಪ್ರಮಾಣದ ತರಗತಿ ನಡೆಸಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 6:40 IST
Last Updated 31 ಡಿಸೆಂಬರ್ 2021, 6:40 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ ನಡೆಸಿದರು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ ನಡೆಸಿದರು   

ಹಾಸನ: ‘ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನುಸರ್ಕಾರ ಆದಷ್ಟು ಬೇಗ ಈಡೇರಿಸಿ, ಪೂರ್ಣ ಪ್ರಮಾಣದ ತರಗತಿಗಳ ನಡೆಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌) ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಸರ್ಕಾರಿ ಕಲಾ ಕಾಲೇಜು ಬಳಿಯಿಂದ ಆರ್‌.ಸಿ. ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಕಾರರು ಹೇಮಾವತಿ ಪ್ರತಿಮೆ, ಎನ್‌.ಆರ್‌ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು.

ಕೋವಿಡ್ ಕಾರಣದಿಂದ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ವಿದ್ಯಾರ್ಥಿಗಳು ಪ್ರವೇಶಿಸದಂತೆ ಪೊಲೀಸರು ಗೇಟ್‌ ಬಂದ್‌ ಮಾಡಿ ತಡೆದರು. ಕೆಲವರನ್ನು ಮಾತ್ರ ಒಳಗೆ ಬಿಟ್ಟು ಮನವಿ ಸಲ್ಲಿಸುವಂತೆ ತಿಳಿಸಿದರು.

ADVERTISEMENT

ಇದರಿಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಲು ಯತ್ನಿಸಿದರು. ಜೋರಾಗಿ ಘೋಷಣೆ ಕೂಗಲು ಮುಂದಾದರು. ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದವರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಅನುವು ಮಾಡಿಕೊಡಲಾಯಿತು.

ಈ ವೇಳೆ ಎಬಿವಿಪಿ ರಾಜ್ಯ ಕಾರ್ಯದರ್ಶಿ ಐಶ್ವರ್ಯಾ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್‌ನಿಂದ ಇಡೀ ರಾಜ್ಯವೇ ತತ್ತರಿಸಿ ಹೋಗಿತ್ತು. ಬಳಿಕ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಪದವಿ ಹಾಗೂ ಸ್ನಾತಕೋತ್ತರ ತರಗತಿ ಗಳು ಆರಂಭವಾಗಿವೆ. ವಿದ್ಯಾರ್ಥಿ ಗಳು ಉತ್ಸಾಹದಿಂದ ತರಗತಿಗೆ ಹಾಜರಾಗು ತ್ತಿದ್ದಾರೆ. ಆದರೆ ಡಿ. 10ರಿಂದ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿರು ವುದರಿಂದ ಪೂರ್ಣ ಪ್ರಮಾಣದ ತರಗತಿಗಳು ನಡೆಯುತ್ತಿಲ್ಲ’ ಎಂದು ಹೇಳಿದರು.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಿಗೆ ಶೇ 80ರಷ್ಟು ಮಾತ್ರ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರ್ಕಾರ ಒಂದು ತಿಂಗಳು ತಡವಾಗಿ ನೇಮಿಸಿಕೊಂಡಿದೆ. ಅಕ್ಟೋಬರ್‌ 28ರಿಂದ ತರಗತಿಗಳನ್ನು ನಡೆಸುತ್ತಿ ದ್ದಾರೆ. ಆದರೆ ಡಿ. 10ರಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿರುವುದರಿಂದ ಈವರೆಗೂ ಯಾವುದೇ ಪಾಠಗಳು ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಇದೇ ತಿಂಗಳ ಕೊನೆಯಲ್ಲಿ ಸಿ–1 ಪರೀಕ್ಷೆಗಳು ನಡೆಯಲಿವೆ. ಹಾಗಾಗಿ ಸರ್ಕಾರ ಆದಷ್ಟು ಬೇಗ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಉಳಿದ ಶೇ 20ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಪೂರ್ಣ ಪ್ರಮಾಣದ ತರಗತಿಗಳು ನಡೆಸಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಎಬಿವಿಪಿ ಸಂಚಾಲಕ ಬೊಮ್ಮಣ್ಣ, ವಿದ್ಯಾರ್ಥಿಗ ಳಾದ ದಾಮಿನಿ, ಭೂಮಿಕಾ, ಚೈತ್ರಾ, ಸಹನಾ, ವರ್ಷಿತಾ, ಕೀರ್ತನಾ, ಚಂದ್ರಿಕಾ, ತೇಜಸ್ವಿನಿ, ಕಾವೇರಿ, ಮನೋಜ್‌, ಧನುಷ್, ಪೃಥ್ವಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.