ಅರಕಲಗೂಡು (ಹಾಸನ ಜಿಲ್ಲೆ): ತಾಲ್ಲೂಕಿನ ಕಳ್ಳಿಮುದ್ದನಹಳ್ಳಿಯಲ್ಲಿ ಮಂಗಳವಾರ ರೈತ ಕೇಶವಯ್ಯ (61) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ‘ಮನೆ ಹರಾಜು ಹಾಕುವುದಾಗಿ ಮೈಕ್ರೋಫೈನಾನ್ಸ್ ಸಂಸ್ಥೆಯು ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದೇ ಕಾರಣ’ ಎಂದು ಅವರ ಪತ್ನಿ ತುಳಸಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.
‘ಕೃಷಿಗಾಗಿ ಹಾಗೂ ಮನೆ ಕಟ್ಟಲು ಖಾಸಗಿ ಮೈಕ್ರೊ ಫೈನಾನ್ಸ್ ಸಂಸ್ಥೆ ಹಾಗೂ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಕೆಲವರಿಂದ ಕೈಸಾಲ ಮಾಡಿದ್ದರು. ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿತ್ತು. ಎರಡು ಕಂತುಗಳನ್ನು ಮರುಪಾವತಿಸದ ಕಾರಣಕ್ಕೆ ಸಂಸ್ಥೆಯವರು ಒತ್ತಡ ಹೇರಿದ್ದರು. ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದರಿಂದ ತೀವ್ರವಾಗಿ ನೊಂದು ಪತಿ ಆತ್ಮಹತ್ಯೆ ಮಾಡಿಕೊಂಡರು’ ಎಂದು ಆರೋಪಿಸಿದ್ದಾರೆ.
ಶಿರಸ್ತೇದಾರ್ ಸಿ.ಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಮೋಹನ್ ನಾಯಕ್ ಮೃತರ ಮನೆಗೆ ಭೇಟಿ ನೀಡಿ, ಪರಿಹಾರದ ಭರವಸೆ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಅತ್ನಿ ಹರೀಶ್, ‘ಕಿರುಕುಳ ಆರೋಪದ ಬಗ್ಗೆ ತಾಲ್ಲೂಕು ಆಡಳಿತ ತನಿಖೆ ನಡೆಸಿ ಮೈಕ್ರೊ ಫೈನಾನ್ಸ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.