ಹಾಸನ: ಆಲೂರು ತಾಲ್ಲೂಕು ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ಮತ್ತೊಮ್ಮೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಪಟೇಲ್ ಮಾತನಾಡಿ, ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆಯ ಪರಿಣಾಮವಾಗಿ ಗ್ರಾಮದ ಮನೆಗಳು ಬಿರುಕು ಬಿಟ್ಟಿವೆ. ರಸ್ತೆಗಳು ಹಾಳಾಗಿವೆ. ಶಾಲಾ ಬಸ್ ಸಂಚಾರ ಅಸಾಧ್ಯವಾಗಿದೆ. ಮಕ್ಕಳು ಶಿಕ್ಷಣಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಜಮೀನಿನಲ್ಲಿ ಬೆಳೆ ಬೆಳೆಯುವುದು ಕಷ್ಟವಾಗುತ್ತಿದೆ. ದನಕರುಗಳು ಬ್ಲಾಸ್ಟಿಂಗ್ ಶಬ್ದಕ್ಕೆ ಬೆಚ್ಚಿ ಬೀಳುತ್ತಿವೆ. ಬ್ಲಾಸ್ಟಿಂಗ್‍ನಿಂದ ಕಾಡು ಪ್ರಾಣಿಗಳು, ವಿಶೇಷವಾಗಿ ಆನೆಗಳು ಊರಿನೊಳಗೆ ಬರುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ. ಜನರ ಹೋರಾಟದಿಂದ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ ಮತ್ತೆ ಪರವಾನಗಿ ಪಡೆಯುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ಸಂದರ್ಭದಲ್ಲೂ ಅಧಿಕಾರಿಗಳೇ ಮಧ್ಯಪ್ರವೇಶಿಸಿ ಗಣಿಗಾರಿಕೆಗೆ ಅನುಕೂಲ ಆಗುವಂತೆ ವರ್ತಿಸುತ್ತಿರುವುದು ಖಂಡನೀಯ. ಜನರ ಹಿತ, ಪರಿಸರ ರಕ್ಷಣೆ ಹಾಗೂ ಗ್ರಾಮಸ್ಥರ ಸುರಕ್ಷತೆಗೆ ಈ ಪ್ರದೇಶದಲ್ಲಿ ಯಾವುದೇ ಹೊಸ ಪರವಾನಗಿ ನೀಡಬಾರದು ಎಂದು ಮನವಿ ಮಾಡುವುದಾಗಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ದಿನೇಶ್ ಎಚ್.ಕೆ., ಮಹಿಳಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷೆ ಸುಧಾ ಗಿರೀಶ್, ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.