ADVERTISEMENT

ಸ್ವಾಭಿಮಾನದಿಂದ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ: ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:49 IST
Last Updated 16 ಫೆಬ್ರುವರಿ 2026, 6:49 IST
ಹಾಸನದಲ್ಲಿ ಶುಕ್ರವಾರ ನಡೆದ ಮಾದಿಗ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನವನ್ನು ಸಚಿವ ಕೆ.ಎಚ್‌. ಮುನಿಯಪ್ಪ ಉದ್ಘಾಟಿಸಿದರು 
ಹಾಸನದಲ್ಲಿ ಶುಕ್ರವಾರ ನಡೆದ ಮಾದಿಗ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನವನ್ನು ಸಚಿವ ಕೆ.ಎಚ್‌. ಮುನಿಯಪ್ಪ ಉದ್ಘಾಟಿಸಿದರು    

ಹಾಸನ: ಮಾದಿಗ ಸಮಾಜ ಸ್ವಾಭಿಮಾನದಿಂದ ಬೆಳೆಯಬೇಕು. ಸ್ವಾಭಿಮಾನದಿಂದ ಈ ಸಮಾಜದ ಅಭಿವೃದ್ಧಿಗೆ ದುಡಿಯಬೇಕು, ಹೋರಾಟ ನ್ಯಾಯಯುತವಾಗಿ ಇರಬೇಕು ಎಂದು ಮಾದರ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ, ಸಚಿವ ಕೆ.ಎಚ್. ಮುನಿಯಪ್ಪ ಸೂಚನೆ ನೀಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಸಮುದಾಯದ ಮುಖಂಡರು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

ಮಾದರ ಮಹಾಸಭಾ ಸದಸ್ಯತ್ವ ನೋಂದಣಿಯ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳಿಗೆ, ಕಡು ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡುವುದಾಗಿದೆ. ಕರ್ನಾಟಕ ಮಾದರ ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿಯನ್ನಾಗಿ ಎಂ.ಆರ್.ವೆಂಕಟೇಶ್ ಅವರನ್ನು, ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ವಿಜಯಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಸಮಾಜದ ಇತರೆ ನಾಯಕರನ್ನು ಒಳಗೊಂಡಂತೆ ಸದಸ್ಯತ್ವ ನೋಂದಣಿಯನ್ನು ತಿಂಗಳ ಒಳಗಾಗಿ ಮುಗಿಸಬೇಕು ಎಂದು ಹೇಳಿದರು.

ADVERTISEMENT

ಸಮಾಜದಲ್ಲಿ ಪಕ್ಷಾತೀತವಾಗಿ ಎಲ್ಲ ನಾಯಕರು, ಸಂಘ– ಸಂಸ್ಥೆಗಳು, ರಾಜ್ಯಮಟ್ಟದ ನಾಯಕರು ಸೇರಿ ಒಟ್ಟಾಗಿ ಸಮುದಾಯವನ್ನು ಒಗ್ಗೂಡಿಸುವ ಹಾಗೂ ಬೆಳೆಸುವ ಕೆಲಸ ಮಾಡಬೇಕಾಗಿದೆ. ನಾವೂ ಮುಂದುವರಿದ ಸಮುದಾಯದಂತೆ ಬದುಕುವ ದಾರಿ ಕಟ್ಟಿಕೊಳ್ಳಬೇಕಾಗಿದೆ. ಸಮಾಜದ ಏಳ್ಗೆಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾದರ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಸಮುದಾಯದ ಅಭ್ಯುದಯಕ್ಕೆ ಸ್ಥಾಪಿಸಲಾಗಿರುವ ಮಹಾಸಭಾದ ಕಾರ್ಯ ಚಟುವಟಿಕೆಗಳಲ್ಲಿ ಸಮರ್ಪಕವಾಗಿ ಭಾಗವಹಿಸಿ, ರಾಜ್ಯ ನಾಯಕರ ಹಾಗೂ ಜಿಲ್ಲಾ ಉಸ್ತುವಾರಿಗಳಾದ ಎಂ.ಆರ್ ವೆಂಕಟೇಶ್ ಅವರ ಸೂಚನೆಯಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಸಮುದಾಯದವರು ಸಹಕಾರ ನೀಡಬೇಕು ಎಂದರು.

ಮಾದರ ಮಹಾಸಭಾದ ಮುಖಂಡ ಧರ್ಮಸೇನ ಮಾತನಾಡಿ, 2015ರಲ್ಲಿ ಪ್ರಾರಂಭವಾದ ಮಹಾಸಭಾ, ಮಾದಿಗ ಸಮುದಾಯವನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡುವ ಮಹತ್ತರ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಒಳಮೀಸಲಾತಿಯ ಸದುಪಯೋಗ ಪಡೆಯಬೇಕು. ಮಹಾಸಭಾವನ್ನು ಬೆಳೆಸಿ ಮುನ್ನಡೆಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಂಸದ ಚಂದ್ರಪ್ಪ, ಎಂ.ಆರ್. ವೆಂಕಟೇಶ್, ರವಿ ಬಸವಾಪುರ ಮಾತನಾಡಿದರು. ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾದರ ಮಹಾಸಭಾದ ಮುಖ್ಯ ಸಂಚಾಲಕ ಬಿ.ಕೆ. ಶಿವಪ್ಪ, ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ಮಾದಿಗ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ಹೋಣಿಕೇರಿ, ಗ್ಯಾಸ್ ಚಂದ್ರ ಕಡೂರು, ಮಂಡ್ಯ ಚಂದ್ರಶೇಖರ್, ಹಾಸನ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮಧು ನಾಯಕ, ಮಹಾಸಭಾ ಪ್ರಧಾನ ಕಾರ್ಯದರ್ಶಿ ಸಿ.ಆರ್ ಮಂಜುನಾಥ್, ದೇವರಾಜ್, ಮುನಿಸ್ವಾಮಿ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕಡಗ ಸತೀಶ್, ಹೊಳೆನರಸೀಪುರ ಸತೀಶ್, ಬೇಲೂರು ಬೈರೇಶ್, ಚನ್ನರಾಯಪಟ್ಟಣ ಪುನೀತ್, ಅರಕಲಗೂಡು ಚನ್ನಪ್ಪ, ಆಲೂರು ಶಿವಣ್ಣ, ಜಿಲ್ಲಾ ಸಮಿತಿ ಸದಸ್ಯೆ ವಸಂತಮ್ಮ, ಶಿಕ್ಷಕರಾದ ರಘು, ಗೌತಮ್, ದೇವರಾಜ್, ಕಡುಬಿನ ಹೊಸಳ್ಳಿ ನಾಗರಾಜ್, ಚಂದ್ರು, ಸಾಕ್ಷರತಾ ರಂಗಸ್ವಾಮಿ, ಚನ್ನರಾಯಪಟ್ಟಣ ಶ್ರೀನಿವಾಸ್, ವೀರಭದ್ರಪ್ಪ, ಗುತ್ತಿನಕೆರೆ ಶಿವಮೂರ್ತಿ, ದೊಡ್ಡಪುರ ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.