
ಹಾಸನ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಉತ್ತಮ ಆಡಳಿತ ಜೊತೆಗೆ, ಸಂವಿಧಾನದ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿವಸ್ ಹಾಗೂ ಅಂಬೇಡ್ಕರ್ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಸಮಾಜ ಪರ ಹೋರಾಟ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಸಾಮಾನ್ಯ ಕೊಡುಗೆಯನ್ನು ಸ್ಮರಿಸಿದ ಅವರು, ದಲಿತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಸಮಾಜದ ನಿರ್ಗತಿಕ ವರ್ಗಗಳಿಗೆ ನ್ಯಾಯ ಹಾಗೂ ಹಕ್ಕುಗಳನ್ನು ಒದಗಿಸಲು ಡಾ. ಅಂಬೇಡ್ಕರ್ ಮಾಡಿದ ಹೋರಾಟವನ್ನು ನೆನೆದರು.
ನಿರ್ಗತಿಕರಿಗೆ ನ್ಯಾಯ, ದುರ್ಬಲರಿಗೆ ಸಾಮಾಜಿಕ ಭದ್ರತೆಗಳು ಅಂಬೇಡ್ಕರ್ ಕನಸಿನ ಭಾರತಕ್ಕೆ ನೀಡಿದ ಮಹತ್ವದ ಕೊಡುಗೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್ ಕನಸು ಕಂಡ ದೇಶವನ್ನು ನಿರ್ಮಿಸಲು ಮೋದಿ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಎಂದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ಶಾಸಕ ಸಿಮೆಂಟ್ ಮಂಜು ಮಾತನಾಡಿ, ಇಡೀ ಪ್ರಪಂಚದಲ್ಲಿ ಅತ್ಯುನ್ನತ, ಬಲಿಷ್ಠ ಸಂವಿಧಾನವನ್ನು ನೀಡಿದವರು ಡಾ.ಅಂಬೇಡ್ಕರ್. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನ ಸೇರಿದಂತೆ ಹಲವು ದೇಶಗಳ ಅಸ್ಥಿರ ಪರಿಸ್ಥಿತಿ ಎದುರಿಸುತ್ತಿದ್ದು, ಬಲಿಷ್ಠ ಸಂವಿಧಾನ ಒಂದು ರಾಷ್ಟ್ರವನ್ನು ಹೇಗೆ ರಕ್ಷಿಸುತ್ತದೆ ಎಂಬುದಕ್ಕೆ ಭಾರತದ ಉದಾಹರಣೆ ಎಂದು ಹೇಳಿದರು.
ಸಂವಿಧಾನ ಬರೆಯುವುದು ಅಷ್ಟೇನೂ ಸುಲಭದ ಕಾರ್ಯವಲ್ಲ. ಅಪಮಾನಗಳನ್ನು ಸಹಿಸಿಕೊಂಡು, ನೂರಾರು ಗ್ರಂಥಗಳನ್ನು ಓದಿ, ಉತ್ಕೃಷ್ಟ ಸಂವಿಧಾನ ರಚಿಸಿದವರು ಡಾ.ಅಂಬೇಡ್ಕರ್ ಎಂದು ಹೇಳಿದರು.
ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು, ಸಮಾಜದ ದುರ್ಬಲ ವರ್ಗಗಳಿಗೆ ಅವಕಾಶಗಳು ಡಾ.ಅಂಬೇಡ್ಕರ್ ನೀಡಿದ ದಾರಿ. ದೇಶಕ್ಕೆ ಸಂವಿಧಾನ ಎನ್ನುವ ಅಮೃತ ಕೊಟ್ಟು, ವಿಷವನ್ನು ಕುಡಿದ ವ್ಯಕ್ತಿ ಅಂಬೇಡ್ಕರ್ ಎಂದು ಪ್ರಧಾನಿ ಮೋದಿ ಹೇಳಿದ್ದರು. ಮಹಿಳೆಯರ ಮೇಲೆ ಅನ್ಯಾಯ, ದಲಿತರ ಮೇಲಿನ ಅವಮಾನ, ಧರ್ಮಾಧಾರಿತ ರಾಜಕೀಯದ ವಿರುದ್ಧ ಅಂಬೇಡ್ಕರ್ ಧೈರ್ಯವಾಗಿ ಧ್ವನಿ ಎತ್ತಿದವರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ದೊರಕಿರುವುದು ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರದಲ್ಲಿ ಎಂದು ತಿಳಿಸಿದರು.
ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಕುಮಾರ್ ನಾಯಕ್, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಎಸ್.ಸಿ. ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಡಿ. ಚಂದ್ರು, ನೇತ್ರಾವತಿ ಮಂಜುನಾಥ, ಶ್ರೀನಿವಾಸ್, ಓಂಕಾರ್, ಪ್ರಶಾಂತ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಜರಿದ್ದರು. ವೇದಾವತಿ ದೇಶಗೀತೆ ಹಾಡಿದರು. ಗಿರೀಶ್ ಸ್ವಾಗತಿಸಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದ ಕೋಟ್ಯಂತರ ಜನರಿಗೆ ರಕ್ಷಣಾ ಕವಚದಂತೆ ಕೆಲಸ ಮಾಡುತ್ತಿದ್ದು ಸಾಮಾಜಿಕ ನ್ಯಾಯ ಅವಕಾಶಗಳ ಸಮಾನತೆಯನ್ನೂ ಒದಗಿಸಿದೆ.ಲಾಲ್ ಸಿಂಗ್ ಆರ್ಯ ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ
ಸಂವಿಧಾನ ಬದಲಿಸಿದವರು ಕಾಂಗ್ರೆಸ್ಸಿನವರು ದೇಶದಲ್ಲಿ ಒಟ್ಟು 106 ಬಾರಿ ಸಂವಿಧಾನ ತಿದ್ದುಪಡಿ ನಡೆದಿವೆ. ಇದರಲ್ಲೇ ಕಾಂಗ್ರೆಸ್ 75 ಬಾರಿ ಕಾಂಗ್ರೆಸ್ಸೇತರ ಸರ್ಕಾರಗಳು 31 ಬಾರಿ ಸಂವಿಧಾನ ಬದಲಿಸಿವೆ. ಸಂವಿಧಾನ ಬದಲಿಸಿದ್ದು ಕಾಂಗ್ರೆಸ್ ಸರ್ಕಾರಗಳು ಪ್ರಧಾನಿ ಮೋದಿ ಅಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ನಿಜವಾದ ಪ್ರಜಾಪ್ರಭುತ್ವ ಉಳಿಸುವವರು ನರೇಂದ್ರ ಮೋದಿ ಸಂವಿಧಾನ ಪಾಲಿಸುವವರು ಬಿಜೆಪಿ. ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ನೀಡಿರುವವರು ಮೋದಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.