ಹಾಸನ: ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಳಿಸಿದೆ. ಎರಡು ದಿನಗಳಿಂದ ವರುಣನ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ.
ಮಳೆಯ ನಡುವೆಯೇ ಜನರು ವ್ಯಾಪಾರ ವಹಿವಾಟು ನಡೆಸಿದರು. ಕೆಲವರು ಮನೆಯಿಂದ ಹೊರಗೆ ಬರಲಿಲ್ಲ. ಮಳೆಯನ್ನು ಲೆಕ್ಕಿಸದೆ ಬಹಳಷ್ಟು ರೈತರು ಜಮೀನುಗಳತ್ತ ಮುಖ ಮಾಡಿದ್ದಾರೆ. ನಗರದ ಬಿ.ಎಂ ರಸ್ತೆ, ಹಳೆ ಮುನ್ಸಿಪಲ್ ಕಚೇರಿರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಸಕಲೇಶಪುರ ತಾಲ್ಲೂಕಿನಲ್ಲಿ ಭಾರೀ ಗಾಳಿ ಹಾಗೂ ಮಳೆಗೆ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೆತ್ತೂರು ಹೋಬಳಿಯಾದಾದ್ಯಂತ ಸುರಿದ ಧಾರಾಕಾರ ಮಳೆಗೆ ಹೊಳೆಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಜಲಾನಯನ ಭಾಗ ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ
ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ಪ್ರಸ್ತುತ 8 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಸಕಲೇಶಪುರ ತಾಲ್ಲೂಕಿನ ತೊರೆ, ಹಳ್ಳಗಳ್ಳಲ್ಲಿ ನೀರಿನ ಹರಿವು ಹೆಚ್ಚಿದೆ.
ಅರಕಲಗೂಡು ತಾಲ್ಲೂಕಿನ ಯಗಟಿ ಗ್ರಾಮದ ನಿಂಗಾಜಮ್ಮ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಘಟನೆ ನಡೆದ ವೇಳೆ ನಾಲ್ಕು ಜನರು ವಾಸವಾಗಿದ್ದರು. ಯಾರಿಗೂ ಪ್ರಾಣಾಪಾಯವಾಗಿಲ್ಲ.
ಕಾವೇರಿ ನದಿ ಪಾತ್ರದಲ್ಲಿ ನಾಲೆಗೆ ನೀರು ಹರಿಸಲಾಗಿದ್ದು, ಭತ್ತದ ಅಗೆ ಹಾಕುತ್ತಿದ್ದಾರೆ. ಅರಕಲಗೂಡು ತಾಲ್ಲೂಕಿನ ಕಟ್ಟೇಪುರ ನಾಲಾ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ತುಂಬಾಕು ಬೆಳೆ ಬೆಳೆಯಲಾಗಿದ್ದು, ಕಟಾವು ಕಾರ್ಯ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.