ADVERTISEMENT

ಅರಸೀಕೆರೆ|‘ಮೂಗುತಿ ದರ್ಶನದಿಂದ ಮುಕ್ತಿ’: ಡಾ.ಶ್ರೀ ಶಿವಾನಂದ ಮಹಾಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಮೇ 2025, 12:44 IST
Last Updated 17 ಮೇ 2025, 12:44 IST
ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ ಕೋಡಿಮಠದ ಲಿಂಗೈಕ್ಯ ಶಿವಲಿಂಗಜ್ಜಯ್ಯ ಅವರ ೧೩೮ನೇ ಸಂಸ್ಮರಣೋತ್ಸವ ಹಾಗೂ ಧಾರ್ಮಿಕ ಸಮಾರಂಭವನ್ನು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿದರು 
ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ ಕೋಡಿಮಠದ ಲಿಂಗೈಕ್ಯ ಶಿವಲಿಂಗಜ್ಜಯ್ಯ ಅವರ ೧೩೮ನೇ ಸಂಸ್ಮರಣೋತ್ಸವ ಹಾಗೂ ಧಾರ್ಮಿಕ ಸಮಾರಂಭವನ್ನು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿದರು    

ಅರಸೀಕೆರೆ: ‘ಶಿವಲಿಂಗಜ್ಜಯ್ಯ ನೂರು ಕೋಟಿ ಜಪಮಾಡಿ ಮೂಗುತಿ ಸಿದ್ಧಿಸಿಕೊಂಡು ಮಾಡಾಳು ಗೌರಮ್ಮನಿಗೆ ತೊಡಿಸಿದ್ದರು. ಹಾಗಾಗಿ ಮಾಡಾಳು ಗೌರಮ್ಮ ಮೂಗುತಿ ಗೌರಮ್ಮ ಎಂದೇ ಪ್ರಸಿದ್ಧಿಯಾಗಿದ್ದು, ಈ ದೇವಿಯ ಮೂಗುತಿ ದರ್ಶನ ಭಾಗ್ಯದಿಂದಲೇ ಮುಕ್ತಿ ದೊರೆಯುತ್ತದೆ’ ಎಂದು ಹಾರನಹಳ್ಳಿ ಕೋಡಿಮಠದ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮಾಡಾಳು ಗೌರಮ್ಮ ದೇವಾಲಯದ ಆವರಣದಲ್ಲಿ ಮಠದಿಂದ ಆಯೋಜಿಸಿದ್ದ, ಲಿಂಗೈಕ್ಯ ಶಿವಲಿಂಗಜ್ಜಯ್ಯ ಅವರ 138ನೇ ಸಂಸ್ಮರಣೋತ್ಸವ ಹಾಗೂ ಧಾರ್ಮಿಕ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

‘ಮಾಡಾಳು ಗೌರಮ್ಮ ತನ್ನ ಮಹಿಮೆ, ಪವಾಡದಿಂದಲೇ ನಾಡಿನಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದು, ಇದೀಗ ತಾಯಿಯ ಹೆಸರಿನಲ್ಲಿ ಮಠದಿಂದ ನಿರ್ಮಿಸುತ್ತಿರುವ ದೇವಾಲಯ ಮುಂದಿನ ದಿನಗಳಲ್ಲಿ ಶಕ್ತಿಪೀಠವಾಗಿ ಹೆಸರುವಾಸಿಯಾಗಲಿದೆ. ಮೂಗುತಿ ಸುಂದರಿ ಮಾಡಾಳು ಗೌರಮ್ಮನ ದರ್ಶನ ಭಾಗ್ಯದಿಂದಲೇ ಜನ್ಮ ಜನ್ಮದ ಪಾಪ ವಿಮೋಚನೆ ಜೊತೆಗೆ ಮೋಕ್ಷ ಸಿಗಲಿದೆ’ಎಂದು ಹೇಳಿದರು.

ADVERTISEMENT

ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ,‘ಮನುಷ್ಯ ಹಣ, ಅಧಿಕಾರದ ಆಸೆಯ ಹಿಂದೆ ಓಡದೆ, ಸತ್ಯಧರ್ಮ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ಮೂಲಕ ಬಸವಣ್ಣ ಹೇಳಿದಂತೆ ಕಾಯಕದಲ್ಲಿ ಕೈಲಾಸ ಕಂಡಿದ್ದೇ ಆದರೆ, ಅಂತಹ ಮನುಷ್ಯನ ಬದುಕು, ಜನ ಮಾತ್ರವಲ್ಲ, ಜನಾರ್ಧನನೂ ಮೆಚ್ಚುವಂತಿರುತ್ತದೆ’ ಎಂದು ಕಿವಿಮಾತು ಹೇಳಿದರು.

ಹಿರಿಯ ನಟ ಎಸ್.ದೊಡ್ಡಣ್ಣ ಮಾತನಾಡಿ, ‘ಶಿವ ನಾದಪ್ರಿಯನೂ ಅಲ್ಲ, ವೇದ ಪ್ರಿಯನೂ ಅಲ್ಲ, ಅವನು ಭಕ್ತಿ ಪ್ರಿಯ. ಅವನನ್ನು ಒಲಿಸಿಕೊಳ್ಳಲು ಶ್ರದ್ಧಾ ಭಕ್ತಿಯಿಂದ ಮಾತ್ರ ಸಾಧ್ಯ. ಹರಿಹರರೂ ಸಹ, ಬದಲಿಸಲಾಗದ ಹಣೆ ಬರಹವನ್ನು ಹಣೆಯ ಮೇಲೆ ವಿಭೂತಿ ಧರಿಸುವುದರಿಂದ ಹಣೆ ಬರಹ ಬದಲಿಸುವ ಶಕ್ತಿ ಇದೆ’ ಎಂದು ಹೇಳಿದರು.

ಈ ವೇಳೆ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಮಾಡಾಳು ವಿರಕ್ತ ಮಠದ ರುದ್ರಮುನಿ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಕೆ.ಬಿದಿರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮೂರು ಕಳಶ ಮಠದ ಜ್ಞಾನಪ್ರಭು ಸಿದ್ಧರಾಮದೇಶಿಕೇಂದ್ರ ಸ್ವಾಮೀಜಿ, ದೊಡ್ಡಮೇಟಿಕುರ್ಕೆ ವಿರಕ್ತ ಮಠದ ಶಶಿಶೇಖರ್ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ತೇಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಹಿರೇಮಠದ ರೇವಣ ಸಿದ್ದೇಶ್ವರ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.