ADVERTISEMENT

ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ: ಚೆಲುವರಾಯಸ್ವಾಮಿ

ಕಾಂಗ್ರೆಸ್ ಸಭೆಯಲ್ಲಿ ಮಾತಿನ ಚಕಮಕಿ:

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 17:00 IST
Last Updated 9 ಡಿಸೆಂಬರ್ 2020, 17:00 IST
ಉದಯಪುರ ಬಳಿ ಬುಧವಾರ ಏರ್ಪಡಿಸಿದ್ದ ಹೊಳೆನರಸೀಪುರ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ನಡುವೆ ಪರಸ್ಪರ ನೂಕಾಟ ನಡೆಯಿತು
ಉದಯಪುರ ಬಳಿ ಬುಧವಾರ ಏರ್ಪಡಿಸಿದ್ದ ಹೊಳೆನರಸೀಪುರ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ನಡುವೆ ಪರಸ್ಪರ ನೂಕಾಟ ನಡೆಯಿತು   

ಚನ್ನರಾಯಪಟ್ಟಣ: ‘ಜಿಲ್ಲೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಅಥವಾ ಒಳ ಒಪ್ಪಂದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಎನ್. ಚೆಲುವರಾಯಸ್ವಾಮಿ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಉದಯಪುರ ಸಮೀಪ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೋವು ಅನುಭವಿಸಿದ್ದಾರೆ. ಇನ್ನು ಮುಂದೆ ಹೀಗಾಗದಂತೆ ಕ್ರಮ ವಹಿಸಲಾಗುವುದು. ಕೋವಿಡ್-19 ಮುಗಿದ ಬಳಿಕ ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕರೆಸಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಲಾಗುವುದು’ ಎಂದರು.

ADVERTISEMENT

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ 5- 6 ಕ್ಷೇತ್ರದಲ್ಲಿ ಗೆಲ್ಲುತ್ತಿತ್ತು. ಒಕ್ಕಲಿಗ ನಾಯಕರಿಗೆ ಜಿಲ್ಲೆಯ ಜೆಡಿಎಸ್ ನಾಯಕರು ಅನ್ಯಾಯ ಮಾಡಿದ್ದಾರೆ. ಕರ್ನಾಟಕದಿಂದ ಪ್ರಧಾನಿ ಪಟ್ಟಕ್ಕೆ ಏರಿದ ಎಚ್.ಡಿ. ದೇವೇಗೌಡ ಅವರ ಬಗ್ಗೆ ಅಭಿಮಾನ ಇದೆ. ಆದರೆ, ಕಾಂಗ್ರೆಸ್ ಪಕ್ಷದ ಸಹಾಯದಿಂದ ಪ್ರಧಾನಮಂತ್ರಿ ಪದವಿ ಪಡೆದ ಗೌಡರು, ಕಾಂಗ್ರೆಸ್ ಬಗ್ಗೆ ಗೌರವ ಇರಿಸಿಕೊಂಡಿಲ್ಲ’ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಭೂ ಸುಧಾರಣೆ ಕಾಯ್ದೆಗೆ ಜೆಡಿಎಸ್ ಬೆಂಬಲಿಸುವ ಮೂಲಕ ಉಳ್ಳವರ ಪರ ಎಂಬುದನ್ನು ಸಾಬೀತು ಮಾಡಿದೆ. ಮಂಗಳವಾರ ಬೆಳಿಗ್ಗೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದ ಜೆಡಿಎಸ್ ಮಧ್ಯಾಹ್ನದ ವೇಳೆಗೆ ಮಸೂದೆಗೆ ಬೆಂಬಲ ಸೂಚಿಸುವ ಮೂಲಕ ದ್ವಿಮುಖ ನೀತಿ ಅನುಸರಿಸಿದೆ’ ಎಂದು ಟೀಕಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೇಯಸ್ ಎಂ ಪಟೇಲ್, ಮುಖಂಡರಾದ ಬಿ.ಪಿ. ಮಂಜೆಗೌಡ, ಹೆರಗುವಾಸು, ಕೃಷ್ಣಮೂರ್ತಿ, ಥಾಮಸ್, ಕಾರ್ಯಕರ್ತ ನಿಂಗೇಗೌಡ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್, ಜೆ.ಎಂ. ರಾಮಚಂದ್ರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾರಾಚಂದನ್, ಮುಖಂಡ ಮುನಿಸ್ವಾಮಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.