ADVERTISEMENT

ಹಾಸನ ಜಿಲ್ಲೆಗೆ ಎಷ್ಟು ಡೋಸ್ ಲಸಿಕೆ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಿ: ರೇವಣ್ಣ

ಜಿಲ್ಲೆಗೆ ಎಷ್ಟು ಡೋಸ್ ಲಸಿಕೆ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಿ: ರೇವಣ್ಣ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಮೇ 2021, 12:36 IST
Last Updated 27 ಮೇ 2021, 12:36 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಜಿಲ್ಲೆಯಲ್ಲಿ 14 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು,ಆರೋಗ್ಯ ಕಾರ್ಯಕರ್ತರು ಸೇರಿದಂತೆ ಈ ವರೆಗೆ 3.20 ಲಕ್ಷಜನರಿಗೆ (ಶೇಕಡಾ 22ರಷ್ಟು) ಮಾತ್ರವೇ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ 16,301 ಮಂದಿಗೆ ನೀಡುವ ಗುರಿ ಹೊಂದಲಾಗಿತ್ತು, ಮೇ 26ರವರೆಗೆ 17,091 ಮಂದಿಗೆ ನೀಡಲಾಗಿದೆ. ಮುಂಚೂಣಿ ಕಾರ್ಯಕರ್ತ 18,312 ಮಂದಿಗೆ ನೀಡುವ ಗುರಿ ಇದ್ದು, 15,154 (ಶೇಕಡಾ 82ರಷ್ಟು) ಜನರಿಗೆ ಲಸಿಕೆನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

45 ರಿಂದ 59 ವರ್ಷದ 3,57,367 ಮಂದಿಗೆ ಲಸಿಕೆ ನೀಡುವ ಗುರಿಹೊಂದಿದ್ದು, ಈವರೆಗೆ ಕೇವಲ 1,32,565 ಜನರಿಗೆ (ಶೇಕಡಾ37ರಷ್ಟು) ಮಾತ್ರ ಲಸಿಕೆ ನೀಡಿದ್ದು, ನಿಗದಿತ ಗುರಿ ಸಾಧಿಸಿಲ್ಲ. 60ವರ್ಷ ಮೇಲ್ಪಟ್ಟ 1,79,679 ಮಂದಿಗೆ ಲಸಿಕೆ ನೀಡುವ ಗುರಿಹೊಂದಿದ್ದು, 1,49,000 (ಶೇಕಡಾ 78ರಷ್ಟು) ಜನರಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

18 ರಿಂದ 40 ವರ್ಷ ವಯಸ್ಸಿನ 14,000 ಮಂದಿಗೆ ಲಸಿಕೆನೀಡುವ ಗುರಿ ಹೊಂದಿದ್ದು, 10,500 ಮಂದಿಗೆ ಮಾತ್ರವೇಲಸಿಕೆ ನೀಡಲಾಗಿದೆ. ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಕೊರತೆಯಿಂದ ನಿಗದಿತ ಗುರಿ ಸಾಧನೆ ಮಾಡಲು ಆಗಿಲ್ಲ. ಲಸಿಕೆ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಯಾವ ಜಿಲ್ಲೆಗೆ ಎಷ್ಟು ಡೋಸ್‌ ಲಸಿಕೆ ನೀಡಲಾಗಿದೆ ಎಂಬುದನ್ನು ಮುಖ್ಯಮಂತ್ರಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಎರಡನೇ ಅಲೆಯಲ್ಲಿ ಜಿಲ್ಲೆಯ 482 ಜನ ಮೃತಪಡಲು ರಾಜ್ಯಸರ್ಕಾರದ ದ್ವೇಷದ ರಾಜಕಾರಣವೇ ಕಾರಣ ಎಂದು ದೂರಿದರು.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಂದ ಹಣವಸೂಲಿ ಮಾಡಲಾಗುತ್ತಿದೆ. ಮಣಿಪಾಲ್ ಹಾಗೂ ಅಪೋಲೊಆಸ್ಪತ್ರೆಯಲ್ಲಿಯೇ ಹತ್ತು ದಿನಕ್ಕೆ ಒಬ್ಬ ಕೋವಿಡ್‌ ರೋಗಿಗೆ ₹1.5 ಲಕ್ಷ ಬಿಲ್ ಮಾಡಿದರೆ, ಜಿಲ್ಲೆಯ ಆಸ್ಪತ್ರೆಗಳಲ್ಲಿ ಕನಿಷ್ಟ₹ 3 ರಿಂದ 4 ಲಕ್ಷ ಬಿಲ್‌ ಮಾಡಲಾಗುತ್ತಿದೆ. ಜಿಲ್ಲೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವೈದ್ಯರ ನಡೆ ಹಳ್ಳಿ ಕಡೆ ಪ್ರಯೋಜನವೇನು’ ಎಂದು ಪ್ರಶ್ನಿಸಿದ ರೇವಣ್ಣ, ಈ ಕಾರ್ಯಕ್ರಮಕ್ಕೆ 50 ವಾಹನ ಹಾಗೂ ಔಷಧಕಿಟ್‌ಗಳನ್ನು ವೈದ್ಯರಿಗೆ ನೀಡಿ ಕಳುಹಿಸಿರುವುದರಿಂದಪ್ರಯೋಜನವಿಲ್ಲ. ಶಾಸಕರು, ತಹಶೀಲ್ದಾರ್‌ಗಳಿಗೆ ಜವಾಬ್ದಾರಿನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರದಿಂದ ಹಳ್ಳಿತಲುಪುವುದರಲ್ಲಿ ಮಧ್ಯಾಹ್ನ ಆಗಲಿದೆ. ಅವರು ಮನೆಗಳಿಗೆ ಭೇಟಿನೀಡಿ ಸೋಂಕಿತರನ್ನು ಪತ್ತೆ ಹಚ್ಚುತ್ತಿದ್ದಾರೆಯೇ ಎಂಬುದನ್ನು ಯಾರುನೋಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ. ಅವರನ್ನು ದೂರುವುದಿಲ್ಲ. ಬೆಳಿಗ್ಗೆ ಎದ್ದರೆ ಇಂತವರು ವೆಂಟಿಲೇಟರ್‌, ಆಮ್ಲಜನಕಸಾಂದ್ರಕ ಕೊಡಿಸಿದ್ದಾರೆ ಎಂದು ಡಿ.ಸಿ ಹೇಳಬೇಕು. ಇಲ್ಲದಿದ್ದರೆ ಅವರನ್ನು ಎತ್ತಂಗಡಿ ಮಾಡುತ್ತಾರೆ. ಜಿಲ್ಲೆಯಲ್ಲಿ ಇಂತಹಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ‍್ಯ ಕೊಡಿ ಎಂದು ಹೇಳಿದರು.

ರೈತರು ಬೆಳೆದ ತರಕಾರಿ ಕೊಳ್ಳುವವರಿಲ್ಲದೆ ಬೀದಿಗೆಎಸೆಯುತ್ತಿದ್ದಾರೆ. ಒಂದು ಎಕರೆಯಲ್ಲಿ ಬೆಳೆ ಬೆಳೆಯಲು ₹25
ಸಾವಿರಕ್ಕೂ ಅಧಿಕ ಖರ್ಚು ಮಾಡಲಾಗಿರುತ್ತದೆ. ಆದರೆ, ಸರ್ಕಾರ ಎಕರೆಗೆ ₹3 ಸಾವಿರ ನೀಡುತ್ತಿದೆ. ಕನಿಷ್ಟ ₹10 ಸಾವಿರ ಪರಿಹಾರ ನೀಡಬೇಕು. ಪತ್ರಕರ್ತರಿಗೂ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.