ಬಾಗೂರು (ನುಗ್ಗೇಹಳ್ಳಿ): ಸಾವಯವ ಸಿರಿಧಾನ್ಯಗಳನ್ನು ಬೆಳೆಯಲು ರೈತರು ಹೆಚ್ಚು ಆಸಕ್ತಿ ವಹಿಸಿದರೆ ಸಾವಯುವ ಕೃಷಿಯಲ್ಲಿ ಹೆಚ್ಚು ಲಾಭಗಳಿಸಬಹುದಾಗಿದೆ ಎಂದು ಸಾವಯವ ಕೃಷಿಕ ಗಣೇಶ್ ಅಭಿಪ್ರಾಯಪಟ್ಟರು.
ಹೋಬಳಿ ಕೇಂದ್ರದ ಶ್ರೀ ಆದಿ ಚುಂಚನಗಿರಿ ಪಿಯು ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರವಣಬೆಳಗೊಳ ಜನ ಕಚೇರಿ ವತಿಯಿಂದ ಆಯೋಜಿಸಿದ್ದ ಪರಿಸರ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಕೃಷಿಯಲ್ಲಿ ಹೆಚ್ಚು ಲಾಭಗಳಿಸಲು ಬೆಳೆಗಳಿಗೆ ಅಪಾಯಕಾರಿ ಕೀಟನಾಶಕ ಸೇರಿದಂತೆ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿರುವುದರಿಂದ ಭೂಮಿಯಲ್ಲಿನ ಎರೆಹುಳು ಸೇರಿದಂತೆ ಸೂಕ್ಷ್ಮಜೀವಿಗಳು ಸಂಪೂರ್ಣ ನಶಿಸಿ ಹೋಗುತ್ತಿವೆ. ಈ ಬೆಳೆಗಳ ತರಕಾರಿ ಸೇರಿದಂತೆ ಆಹಾರ ಪದಾರ್ಥಗಳನ್ನು ಬಳಸಿದರೆ ಮನುಷ್ಯನ ಆರೋಗ್ಯದ ಮೇಲು ಪರಿಣಾಮ ಬೀರಲಿದೆ. ಆದ್ದರಿಂದಲೇ ಕ್ಯಾನ್ಸರ್ ಪಿಡಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭೂಮಿಯಲ್ಲಿ ಯಥೇಚ್ಛವಾಗಿ ಗಿಡಮೂಲಿಕೆಗಳ ಸಸ್ಯಗಳು ಸಿಗುತ್ತವೆ. ಪ್ರತಿ ಕಾಯಿಲೆಗೂ ಒಂದೊಂದು ಸಸ್ಯವು ಔಷಧಿ ಗುಣಗಳನ್ನು ಹೊಂದಿದೆ. ಆದರೆ ಮನುಷ್ಯನಿಗೆ ಈ ಬಗ್ಗೆ ತಿಳಿಯುತ್ತಿಲ್ಲ. ಪ್ರತಿ ಕಾಯಿಲೆಗೂ ಔಷಧಿಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾವಯವ ಕೃಷಿಯತ್ತ ರೈತರು ಮುಖ ಮಾಡಿದರೆ ಹೆಚ್ಚು ಲಾಭಗಳಿಸುವುದರ ಜೊತೆಗೆ ಭೂಮಿಯ ಫಲವತ್ತತೆಯನ್ನು ಕೂಡ ಕಾಪಾಡಬಹುದಾಗಿದೆ ಎಂದರು. ಕಳೆದ 25 ವರ್ಷಗಳಿಂದ ನಾನು ಆಸ್ಪತ್ರೆಗೆ ಹೋಗದೆ ಪರಿಸರದಲ್ಲಿ ಸಿಗುವ ಗಿಡಮೂಲಿಕೆಯ ಸಸ್ಯಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಯೋಗೇಶ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪರಿಸರ ಕಾರ್ಯಕ್ರಮ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗುತ್ತಿದೆ. ಮನುಷ್ಯನ ದುರಾಸೆಯಿಂದ ಇಂದು ಪ್ರಕೃತಿ ಸಂಪೂರ್ಣ ಕಲುಷಿತ ಗೊಂಡಿದ್ದು, ಈ ಕಾರಣದಿಂದಲೇ ವರ್ಷದಿಂದ ವರ್ಷಕ್ಕೆ ಕಾಲ ಕಾಲಕ್ಕೆ ಮಳೆಯಾಗದೆ ಬರಗಾಲ– ಅತಿವೃಷ್ಟಿ ಉಂಟಾಗುತ್ತಿದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಪರಿಸರ ಕಾರ್ಯಕ್ರಮದ ಅಂಗವಾಗಿ ಪರಿಸರ ಸಂರಕ್ಷಣೆಯ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ನಟರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಯೋಜನಾ ಕಚೇರಿ ಯೋಜನಾಧಿಕಾರಿ ಪುರಂದರ.ಕೆ, ಯೋಜನೆಯ ಕೃಷಿ ಮೇಲ್ವಿಚಾರಕ ಟಿ. ಮಾದೇವ ಪ್ರಸಾದ್, ಮೇಲ್ವಿಚಾರಕಿ ಲತಾ, ಉಪನ್ಯಾಸಕರಾದ ಗೌತಮ್, ಯಶಸ್ವಿನಿ, ರಾಣಿ, ದೇವಿಕಾ, ಸೇವಾ ಪ್ರತಿನಿಧಿ ಸವಿತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.