ADVERTISEMENT

ಚುನಾವಣೆ ಪಾರದರ್ಶಕವಾಗಿ ನಡೆಯುವುದಿಲ್ಲ: ಗೃಹ ಸಚಿವ ಎಂ.ಬಿ.ಪಾಟೀಲ್‌ ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 12:09 IST
Last Updated 10 ಏಪ್ರಿಲ್ 2019, 12:09 IST
   

ಹಾಸನ: ಕೇಂದ್ರ ಸರ್ಕಾರದ ಒತ್ತಡಕ್ಕೆ ಒಳಪಟ್ಟು ಚುನಾವಣಾ ಆಯೋಗ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಆರೋಪಿಸಿದರು.

ಬಿಜೆಪಿ ನಾಯಕರು ಆರೋಪ ಮಾಡಿದ ತಕ್ಷಣ ಯಾವುದೇ ದೂರುಗಳು ಇಲ್ಲದಿದ್ದರೂ ಆಯೋಗದ ನೀತಿ, ನಿಯಮ ಉಲ್ಲಂಘಿಸಿ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ವರ್ಗ ಮಾಡಲಾಗುತ್ತಿದೆ. ಉದಾಹರಣೆಗೆ ವಿಜಯಪುರ ಜಿಲ್ಲಾಧಿಕಾರಿ ಅವರನ್ನು ಸಕಾರಣ ಇಲ್ಲದೆ ವರ್ಗ ಮಾಡಲಾಗಿದೆ. ರಾಜ್ಯದಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಯುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಧರ್ಮ ಮತ್ತು ಜಾತಿ ಆಧರಿಸಿ ಚುನಾವಣೆ ನಡೆಯುತ್ತಿಲ್ಲ. ಲಿಂಗಾಯತ ಧರ್ಮ, ವೀರಶೈವ ಧರ್ಮ ಯಾವ ಪಕ್ಷಕ್ಕೂ ಸಂಬಂಧಪಟ್ಟಿಲ್ಲ. ಲಿಂಗಾಯತ ಧರ್ಮ ನನ್ನ ಅಸ್ಮಿತೆ, ನಾನು ಆ ಧರ್ಮದಲ್ಲಿ ಹುಟ್ಟಿದ್ದೇನೆ ಎಂದರು.

ADVERTISEMENT

‘ಶಾಸಕರ ಖರೀದಿಗೆ ಕೋಟ್ಯಂತರ ರೂಪಾಯಿ ಸಂಗ್ರಹಿಸಿಟ್ಟುಕೊಂಡಿದ್ದ ಬಿಜೆಪಿ ನಾಯಕರ ಮನೆ ಮೇಲೆ ಐಟಿ ಮತ್ತು ಜಾರಿ ನಿರ್ದೇಶನಾಲಯ ದಾಳಿ ಏಕೆ ನಡೆಸಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಕೇವಲ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಮನೆ ಮೇಲೆ ದಾಳಿ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಯನ್ನು ಕಾರಣ ಇಲ್ಲದೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಪಾರದರ್ಶಕ ಚುನಾವಣೆ ನಡೆಯುತ್ತದೆ ಎಂಬ ನಂಬಿಕೆ ಇಲ್ಲ ಎಂದು ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.