ADVERTISEMENT

ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ

ಉಸಿರುಗಟ್ಟಿಸಿ ಕೊಲೆಗೈದು, ಹೃದಯಾಘಾತ ಎಂದು ಬಿಂಬಿಸಿದ್ದ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 12:33 IST
Last Updated 14 ಡಿಸೆಂಬರ್ 2018, 12:33 IST
ಸುರೇಶ್‌
ಸುರೇಶ್‌   

ಹಾಸನ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕೊಲೆಗೈದು ನಂತರ ಹೃದಯಾಘಾತದಿಂದ ಸತ್ತಿದ್ದಾಳೆ ಎಂದು ಬಿಂಬಿಸಿದ್ದ ಪತಿಗೆ 5 ನೇ ಜಿಲ್ಲಾ ಮತ್ತು ಸೇಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳದ ನಿವಾಸಿ ಸುರೇಶ್ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಸುರೇಶ್ ಮತ್ತು ಪತ್ನಿ ಗೀತಾ ನಡುವೆ ಅನೇಕ ಸಲ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋಗಿ, 2015ರ ಮಾರ್ಚ್ 8 ರಂದು ಮನೆಯಲ್ಲಿಯೇ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ. ನಂತರ ಬಚಾವಾಗಲು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಾನೇ ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ತವರು ಮನೆಗೆ ಕೊಂಡೊಯ್ದಿದ್ದ.

ಸುರೇಶ್ ಮುಖ ಹಾಗೂ ಮೃತ ಗೀತಾಳ ಮೈಮೇಲೆ ಗಾಯಗಳಾಗಿದ್ದರಿಂದ ಅನುಮಾನಗೊಂಡ ಗೀತಾ ತಂದೆ ಗೋವಿಂದೇಗೌಡ, ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದರು.

ADVERTISEMENT

ಪ್ರಕರರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆದರೆ ವಿಚಾರಣೆ ವೇಳೆ ಮೃತಳ ಪೋಷಕರು ಹಾಗೂ ಸಂಬಂಧಿಕರು ಪ್ರತಿಕೂಲ ಸಾಕ್ಷಿ ನುಡಿದಿದ್ದರಿಂದ ಪ್ರಕರಣ ಬಿದ್ದು ಹೋಗುವ ಹಂತಕ್ಕೆ ಬಂದಿತ್ತು.

ಆದರೆ ಮರಣೋತ್ತರ ಪರೀಕ್ಷೆ ವೇಳೆ ಮೃತಳ ಉಗುರಲ್ಲಿದ್ದ ಸಣ್ಣ ಮಾಂಸದ ತುಣುಕನ್ನು ವೈದ್ಯರು ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. ಅದಾದ ಬಳಿಕ ಆರೋಪಿಯ ರಕ್ತವನ್ನೂ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅಂತಿಮವಾಗಿ ಉಗುರಲ್ಲಿದ್ದ ಸಣ್ಣ ಚರ್ಮದ ಕಲೆ ಸುರೇಶನದ್ದೇ ಎಂಬುದು ರುಜುವಾತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಗಜಾನನ ಭಟ್‌ ಅವರು ಜೀವಾವಧಿ ಶಿಕ್ಷೆ ವಿಧಿಸಿದರು.

ಸರ್ಕಾರದ ಪರವಾಗಿ ಅಭಿಯೋಜಕ ಜಯರಾಮ್ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.