ADVERTISEMENT

ಅನಧಿಕೃತ ಬೆಳೆಗಾರರ ದಂಡ ಶುಲ್ಕ ಮನ್ನಾ: ತಂಬಾಕು ಬೆಳೆಗಾರರ ಕೈಹಿಡಿದ ಸರ್ಕಾರದ ಕ್ರಮ

ಬಿ.ಪಿ.ಗಂಗೇಶ್‌
Published 29 ಜನವರಿ 2024, 6:32 IST
Last Updated 29 ಜನವರಿ 2024, 6:32 IST
ಜಿ.ಬಿ. ಸುಬ್ಬರಾವ್‌
ಜಿ.ಬಿ. ಸುಬ್ಬರಾವ್‌   

ಕೊಣನೂರು (ಹಾಸನ ಜಿಲ್ಲೆ): ಅನಧಿಕೃತ ತಂಬಾಕು ಬೆಳೆಗಾರರು ತಂಬಾಕನ್ನು ಮಾರಲು ಪಾವತಿಸಬೇಕಿದ್ದ ದಂಡ ಶುಲ್ಕವನ್ನು ಈ ವರ್ಷ ಮನ್ನಾ ಮಾಡಲಾಗಿದ್ದು, 1,600ಕ್ಕೂ ಹೆಚ್ಚು ಬೆಳೆಗಾರರಿಗೆ ಆಗುತ್ತಿದ್ದ ಸಾವಿರಾರು ರೂಪಾಯಿ ಅನಗತ್ಯ ನಷ್ಟ ತಪ್ಪಿದಂತಾಗಿದೆ.

ಪರವಾನಗಿ ಹೊಂದಿರುವವರಂತೆ ಕಷ್ಟಪಟ್ಟು ತಂಬಾಕು ಬೆಳೆಸುವ ಬೆಳೆಗಾರರು, ಪರವಾನಗಿ ಇಲ್ಲದ್ದಕ್ಕೆ ಅಧಿಕೃತ ಮಾರುಕಟ್ಟೆಯಲ್ಲಿ ಪ್ರತ್ಯೇಕ ದಂಡ ಶುಲ್ಕ ಕಟ್ಟಿ ಮಾರಾಟ ಮಾಡಬೇಕಿತ್ತು. ಇಲ್ಲವಾದಲ್ಲಿ ಮಧ್ಯವರ್ತಿಗಳು ಕೇಳುವ ಬೆಲೆಗೆ ಮಾರಿ ಸಿಕ್ಕ ಬೆಲೆಗೆ ತೃಪ್ತಿ ಪಡಬೇಕಿತ್ತು.

ಕೆಲ ವರ್ಷಗಳಿಂದ ತಂಬಾಕು ಉತ್ಪಾದನೆಯ ವೆಚ್ಚವೂ ಏರಿಕೆಯಾಗುತ್ತಿದ್ದು, ದಂಡ ಕಟ್ಟಿ ತಂಬಾಕು ಮಾರಾಟ ಮಾಡುವುದು ಅನಧಿಕೃತ ಬೆಳೆಗಾರರಿಗೆ ನುಂಗಲಾರದ ತುತ್ತಾಗಿತ್ತು. 2023-24ನೇ ಸಾಲಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ಮತ್ತು ತಂಬಾಕು ಮಂಡಳಿಯು, ದಂಡವನ್ನು ಮನ್ನಾ ಮಾಡಿರುವುದು ಬರಗಾಲದಲ್ಲಿ ರೈತರ ಕೈಹಿಡಿದಂತಾಗಿದೆ.

ADVERTISEMENT

ಮುಂದೊಂದು ದಿನ ನಮಗೂ ತಂಬಾಕು ಬೆಳೆಯುವ ಪರವಾನಗಿ ಸಿಗಬಹುದು ಎಂಬ ಆಸೆಯಿಂದ, ಲಾಭವಿಲ್ಲದಿದ್ದರೂ ತಪ್ಪದೇ ತಂಬಾಕು ಉತ್ಪಾದನೆ ಮಾಡಿಕೊಂಡು ಬರುತ್ತಿರುವ ಅನಧಿಕೃತ ಬೆಳೆಗಾರರಿಗೆ, ಈ ವರ್ಷ ಮಾರುಕಟ್ಟೆಯಲ್ಲಿನ ಉತ್ತಮ ದರ ಹಾಗೂ ದಂಡದ ಮೊತ್ತವಾದ ಶೇ 7ರಷ್ಟು ಹಣ ಉಳಿತಾಯ ಆಗಿರುವುದು ವರವಾಗಿ ಪರಿಣಮಿಸಿದೆ.

2022-23ನೇ ಸಾಲಿನಲ್ಲಿ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 1,620 ಅನಧಿಕೃತ ಬೆಳೆಗಾರರು ತಾವು ಬೆಳೆದ ತಂಬಾಕನ್ನು ಮಾರಿದ್ದು, ₹9 ಕೋಟಿ ವಹಿವಾಟು ದಾಖಲಿಸಿದ್ದಾರೆ. ಫ್ಲಾಟ್ ಫಾರಂ 7ರಲ್ಲಿ ಒಟ್ಟು 1,251 ಅನಧಿಕೃತ ಬೆಳೆಗಾರರು 346 ಟನ್‌ ತಂಬಾಕು ಮಾರಿ ₹7.4 ಕೋಟಿ ವಹಿವಾಟು ನಡೆಸಿದ್ದಾರೆ. ಇಲ್ಲಿ ಕೆ.ಜಿಗೆ ₹205.16 ಸರಾಸರಿ ದರ ಸಿಕ್ಕಿದೆ. ಇನ್ನು ಫ್ಲಾಟ್ ಫಾರಂ 63ರಲ್ಲಿ 369 ಅನಧಿಕೃತ ಬೆಳೆಗಾರರು 76 ಟನ್‌ ತಂಬಾಕು ಮಾರಾಟ ಮಾಡಿ ₹1.55 ಕೋಟಿ ವಹಿವಾಟು ನಡೆಸಿದ್ದಾರೆ. ಇಲ್ಲಿ ಪ್ರತಿ ಕೆ.ಜಿಗೆ ಸರಾಸರಿ ₹203 ಬೆಲೆ ಸಿಕ್ಕಿದೆ.

‘2023-24ನೇ ಸಾಲಿಗೆ ಅಧಿಕೃತ ಬೆಳೆಗಾರರು ಉತ್ಪಾದಿಸಿರುವ ಹೆಚ್ಚುವರಿ ತಂಬಾಕಿಗೂ ದಂಡ ಶುಲ್ಕವನ್ನು ರದ್ದುಪಡಿಸಲಾಗಿದ್ದು, ಎಲ್ಲ ನೋಂದಾಯಿತ ಅಧಿಕೃತ ಮತ್ತು ಅನಧಿಕೃತ ಬೆಳೆಗಾರರು ಮದ್ಯವರ್ತಿಗಳ ಬಳಿ ಮಾರಾಟ ಮಾಡದೇ, ಮಂಡಳಿಯ ಮಾರುಕಟ್ಟೆಯಲ್ಲೇ ಮಾರಿ ಲಾಭ ಪಡೆಯಬೇಕು’ ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಸುಬ್ಬರಾವ್ ಸಲಹೆ ನೀಡಿದ್ದಾರೆ.

ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ತಂಬಾಕು ವಹಿವಾಟು ನಡೆಯುತ್ತಿರುವುದು
ಬರ ಪರಿಸ್ಥಿತಿಯ ಕಾರಣದಿಂದಾಗಿ ಈ ವರ್ಷ ಅನಧಿಕೃತ ಬೆಳೆಗಾರರು ಉತ್ಪಾದಿಸಿರುವ ತಂಬಾಕನ್ನು ಮಾರಾಟ ಮಾಡಲು ವಿಧಿಸುತ್ತಿದ್ದ ದಂಡ ಶುಲ್ಕ ಮನ್ನಾ ಮಾಡಲಾಗಿದೆ
ಸುಬ್ಬರಾವ್ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ
ಜೆಡಿಎಸ್‌ ವರಿಷ್ಠರಾದ ಎಚ್.ಡಿ. ದೇವೇಗೌಡ ಸಂಸದರಾದ ಪ್ರಜ್ವಲ್ ಪ್ರತಾಪ ಸಿಂಹ ಅವರ ಸತತ ಶ್ರಮದಿಂದಾಗಿ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್‌ ದಂಡ ಶುಲ್ಕ ಮನ್ನಾ ಮಾಡಿದ್ದಾರೆ
ಮೋಹನ್ ಮಲ್ಲಪ್ಪ ಜೆಡಿಎಸ್ ಮುಖಂಡ
ದಂಡ ಶುಲ್ಕ ಮನ್ನಾ ಮಾಡಿರುವುದು ಸ್ವಾಗತಾರ್ಹ. ತಂಬಾಕು ಉತ್ಪಾದನೆ ಮಾಡುವ ಎಲ್ಲ ರೈತರಿಗೂ ಪರವಾನಗಿ ನೀಡಬೇಕು
ಸೀಬಳ್ಳಿ ಯೋಗಣ್ಣ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.