ADVERTISEMENT

ಸಮರ್ಪಕ ವಿದ್ಯುತ್‌ ಸರಬರಾಜಿಗೆ ಆಗ್ರಹ

ಆಲೂರು ತಾಲ್ಲೂಕಿನ ಮಲಗಳಲೆ ಗ್ರಾಮದಲ್ಲಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:13 IST
Last Updated 18 ಜೂನ್ 2021, 5:13 IST
ಆಲೂರು ತಾಲ್ಲೂಕಿನ ಮಲಗಳಲೆ ಗ್ರಾಮದಲ್ಲಿ ಬಾವಿಯಿಂದ ನೀರು ತೆಗೆದುಕೊಂಡು ಹೋಗುತ್ತಿರುವ ಗ್ರಾಮಸ್ಥರು
ಆಲೂರು ತಾಲ್ಲೂಕಿನ ಮಲಗಳಲೆ ಗ್ರಾಮದಲ್ಲಿ ಬಾವಿಯಿಂದ ನೀರು ತೆಗೆದುಕೊಂಡು ಹೋಗುತ್ತಿರುವ ಗ್ರಾಮಸ್ಥರು   

ಆಲೂರು: ತಾಲ್ಲೂಕಿನ ಮಲಗಳಲೆ ಗ್ರಾಮದಲ್ಲಿ ಮೂರು ತಿಂಗಳಿನಿಂದ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೇ ಜನ ಕತ್ತಲಲ್ಲಿ ರಾತ್ರಿ ಕಳೆಯುವಂತಾಗಿದೆ. ಕುಡಿಯುವ ನೀರು, ವಿದ್ಯಾರ್ಥಿಗಳ ಆನ್‍ಲೈನ್ ಶಿಕ್ಷಣಕ್ಕೆ ತೊಂದರೆಯಾಗಿದ್ದು, ಸೆಸ್ಕ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 90 ಕುಟುಂಬಗಳಿರುವ ಈ ಗ್ರಾಮಕ್ಕೆ ಮಗ್ಗೆ ವಿದ್ಯುತ್ ಪರಿವರ್ತನಾ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಕಾಡಾನೆಗಳು ಹೆಚ್ಚಾಗಿ ದಾಳಿ ನೀಡುವ ಗ್ರಾಮ ಇದಾಗಿದೆ. ಜನಸಾಮಾನ್ಯರು ಯಾವಾಗಲೂ ಜೀವಭಯದಿಂದ ಬದುಕಬೇಕಾಗಿದೆ.

ಮೂರು ತಿಂಗಳಿನಿಂದ ಈ ಗ್ರಾಮಕ್ಕೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಒಮ್ಮೊಮ್ಮೆ ವಾರಗಟ್ಟಲೆ ವಿದ್ಯುತ್ ಬರುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ADVERTISEMENT

ಸರ್ಕಾರದಿಂದ ಮನೆಗಳಿಗೆ ನಲ್ಲಿ ನೀರು ಸರಬರಾಜಿಗೆ ವ್ಯವಸ್ಥೆ ಕಲ್ಪಿಸಿದರೂ, ವಿದ್ಯುತ್ ಇಲ್ಲದ ಪರಿಣಾಮ ನೀರು ಬರುತ್ತಿಲ್ಲ. ಸುಮಾರು 80 ಅಡಿ ಆಳದ ಬಾವಿಯಿಂದ ಕುಡಿಯಲು ನೀರನ್ನು ತೆಗೆದುಕೊಂಡು ಹೋಗುವ ಅನಿವಾರ್ಯ ಉಂಟಾಗಿದೆ. ಇತರೆ ಬಳಕೆಗೆ ಮಳೆ ನೀರನ್ನು ಸಂಗ್ರಹಿಸು ವಂತಾಗಿದೆ.

‘ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣ ಪಡೆಯುತ್ತಾರೆ. ಸಮರ್ಪಕ ವಿದ್ಯುತ್‌ ಸರಬರಾಜು ಇಲ್ಲದೇ ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳುವುದಕ್ಕೂ ಕಷ್ಟವಾಗಿದೆ. ರಾತ್ರಿ ವೇಳೆ ವಿದ್ಯುತ್‌ ಇಲ್ಲದೆ ಮತ್ತೊಂದೆೆಡೆ ಕಾಡಾನೆ ದಾಳಿಯ ಭಯ ಉಂಟು ಮಾಡಿದೆ’ ಎಂದು ಕೆ. ಹೊಸಕೋಟೆ ರೈತ ಸಂಘದ ಸದಸ್ಯ ಎಂ.ಎನ್. ಪರಮೇಶ್ ಸಮಸ್ಯೆ ಬಿಚ್ಚಿಟ್ಟರು.

‘ಗ್ರಾಮದಲ್ಲಿ ವಿದ್ಯುತ್ ಕಣ್ಣಾಮು ಚ್ಚಾಲೆಯಿಂದ ಮಕ್ಕಳು ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕುಡಿಯುವ ನೀರಿಗೆ ತೊಂದರೆಯಾಗಿದೆ. ಸುತ್ತಮುತ್ತಲ ಗ್ರಾಮದಲ್ಲಿ ವಿದ್ಯುತ್ ಇರುತ್ತದೆ, ಸ್ಥಳೀಯ ಲೈನ್‍ಮೆನ್ ಸಂಪರ್ಕಿಸಿದರೆ ನೀವೇ ಲೈನ್ ಸರಿಮಾಡಿಕೊಳ್ಳಿ ಎಂದು ಉತ್ತರ ನೀಡುತ್ತಾರೆ. ಪ್ರಾಣಾಪಾಯವಾದರೆ ಯಾರು ಹೊಣೆ? ಮಲಗಳಲೆ ಗ್ರಾಮಕ್ಕೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಸೆಸ್ಕ್‌ ಅಧಿಕಾರಿಗಳನ್ನು ಒತ್ತಾಯಿಸುತ್ತಾರೆ.

‘ಮಳೆಗಾಲದಲ್ಲಿ ಮರಗಳು ಬೀಳುವುದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಿರಬಹುದು. ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌
ರಂಗೇಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.