ADVERTISEMENT

ಸಕಲೇಶಪುರ | ಇಂದಿರಾ ಕ್ಯಾಂಟೀನ್‌: ಬಡವರ ಅನ್ನಕ್ಕೆ ಕನ್ನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 5:13 IST
Last Updated 23 ನವೆಂಬರ್ 2023, 5:13 IST
ಸಕಲೇಶಪುರದ ಇಂದಿರಾ ಕ್ಯಾಂಟೀನ್
ಸಕಲೇಶಪುರದ ಇಂದಿರಾ ಕ್ಯಾಂಟೀನ್   

ಸಕಲೇಶಪುರ: ಹಸಿದವರಿಗೆ ಅನ್ನ ನೀಡಲು ರಾಜ್ಯ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರ ಅನ್ನಕ್ಕೂ ಕನ್ನ ಹಾಕಲಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಹಸಿದವರು ಕ್ಯಾಂಟೀನ್‌ಗೆ ಬಂದರೆ, ಊಟ ತಿಂಡಿ ಖಾಲಿಯಾಗಿದೆ ಎಂದು ವಾಪಸ್‌ ಕಳುಹಿಸಲಾಗುತ್ತಿದೆ. ತಿಂಗಳ ಅಂತ್ಯದಲ್ಲಿ ನಿತ್ಯ 280 ರಿಂದ 295 ಮಂದಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಸರಾಸರಿ 50 ಮಂದಿ ಊಟ ಮಾಡಿದ್ದಾರೆ ಎಂದು ಸರ್ಕಾರಕ್ಕೆ ಲೆಕ್ಕ ನೀಡಲಾಗುತ್ತಿದೆ ಎನ್ನುವ ದೂರುಗಳು ವ್ಯಾಪಕವಾಗಿವೆ.

ಹಸಿದು ಊಟ, ತಿಂಡಿಗೆ ಕ್ಯಾಂಟೀನ್‌ಗೆ ಹೋದರೆ, ರಾತ್ರಿ ಬಾಗಿಲು ಮುಚ್ಚಿರುತ್ತದೆ. ಬೆಳಿಗ್ಗೆ, ಮಧ್ಯಾಹ್ನ ಊಟ, ತಿಂಡಿ ಖಾಲಿ ಆಗಿದೆ ಎಂದು ಹೇಳಿ ಕಳಿಸುತ್ತಾರೆ ಎಂದು ಕ್ಯಾಂಟೀನ್‌ಗೆ ಬರುವ ಜನರು ದೂರುತ್ತಿದ್ದಾರೆ.

ADVERTISEMENT

ಕೆಲವು ಹೊಟೆಲ್‌ನವರು ಬಾಕ್ಸ್‌ಗಳಲ್ಲಿ ಇಡ್ಲಿ ಹಾಗೂ ಇನ್ನಿತರ ಉಪಾಹಾರವನ್ನು ಪ್ಲೇಟ್‌ಗೆ ₹ 5 ನೀಡಿ, ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ವಿದ್ಯುತ್ ಕಡಿತ

ಸುಮಾರು ₹ 36 ಸಾವಿರ ವಿದ್ಯುತ್ ಬಿಲ್‌ ಕಟ್ಟದೇ ಇರುವುದರಿಂದ ಮೂರು ತಿಂಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಕ್ಯಾಂಟೀನ್ ಸಿಬ್ಬಂದಿಯೇ ತಿಳಿಸಿದರು. ವಿದ್ಯುತ್ ದೀಪಗಳಿಲ್ಲದೇ ಕತ್ತಲಾಗಿರುವುದರಿಂದ, ರಾತ್ರಿ ಊಟಕ್ಕೆ ಯಾರೊಬ್ಬರೂ ಕ್ಯಾಂಟೀನ್‌ಗೆ ಹೋಗುತ್ತಿಲ್ಲ. ಸರಾಸರಿ 45 ರಿಂದ 50 ಊಟ ನೀಡಲಾಗಿದೆ ಎಂದು ಸರ್ಕಾರಕ್ಕೆ ನೀಡಿರುವ ಲೆಕ್ಕದಲ್ಲಿ ತೋರಿಸಲಾಗಿದೆ.

ಕ್ಯಾಂಟೀನ್‌ ಉಸ್ತುವಾರಿಯನ್ನು ಪುರಸಭೆ ಮುಖ್ಯಾಧಿಕಾರಿ ನಿರ್ವಹಣೆಗೆ ಬಿಡಲಾಗಿದೆ. ಇಡೀ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪುರಸಭೆ, ಇಂದಿರಾ ಕ್ಯಾಂಟೀನ್‌ಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಪಕ್ಕದ ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನೆ ಕಚೇರಿಯಿಂದ ತಾತ್ಕಾಲಿಕ ಪೈಪ್‌ ಮೂಲಕ ನೀರಿನ ಸಂಪರ್ಕ ಪಡೆಯಲಾಗಿದೆ.

ಬೆಳಿಗ್ಗೆ 300 ಹಾಗೂ ಮಧ್ಯಾಹ್ನ 300 ಜನರಿಗೆ ಊಟ ನೀಡುತ್ತೇವೆ ಎಂದು ಲೆಕ್ಕ ನೀಡುವ ಕ್ಯಾಂಟೀನ್‌ನ ರೆಫ್ರಿಜಿಯೇಟರ್‌ನಲ್ಲಿ ಕೊಳೆತಿರುವ ತರಕಾರಿಗಳನ್ನು ಇಟ್ಟುಕೊಳ್ಳಲಾಗಿದೆ. ‘ಕೊಳೆತ ಭಾಗವನ್ನು ಕತ್ತರಿಸಿ, ಹೆರೆದು ಸಾಂಬರ್ ಮಾಡುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಹೇಳುತ್ತಾರೆ.

ದಿನಸಿ ದಾಸ್ತಾನು ಇಲ್ಲ

10 ಕೆಜಿ ಅಕ್ಕಿ ಬಿಟ್ಟರೆ, ಹಸಿರು ಮೆಣಸಿನಕಾಯಿ, ಈರುಳ್ಳಿ, ಬೇಳೆ, ಸಾಂಬಾರ್ ಪದಾರ್ಥಗಳು ಕ್ಯಾಂಟೀನ್‌ನಲ್ಲಿ ಕಂಡು ಬರಲಿಲ್ಲ. ಮಂಗಳವಾರ ಬೆಳಿಗ್ಗೆ 300 ಜನರಿಗೆ ಇಡ್ಲಿ ಮಾಡುತ್ತೇವೆ ಎಂದು ಸಿಬ್ಬಂದಿ ಹೇಳಿಕೆ ನೀಡಿದರೆ, ಸೋಮವಾರ ರಾತ್ರಿ 8.30 ಆದರೂ ಯಾವುದೇ ದಿನಸಿ ಪದಾರ್ಥಗಳು ದಾಸ್ತಾನು ಕಂಡು ಬರಲಿಲ್ಲ. ಎಲ್ಲವೂ ಖಾಲಿಯಾಗಿರುವುದು ಕಂಡು ಬಂತು.

ಕೆಲಸ ಮಾಡದ ಸಿಸಿಟಿವಿ ಕ್ಯಾಮೆರಾ

ಕ್ಯಾಂಟೀನ್‌ನಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಎಷ್ಟು ಮಂದಿ ಬಂದು ತಿಂಡಿ ಹಾಗೂ ಊಟ ಮಾಡಿ ಹೋಗಿದ್ದಾರೆ ಎಂಬುದನ್ನು ದಾಖಲಿಸಲು ಸರ್ಕಾರ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಿಗೆ 3–4 ತಿಂಗಳಿಂದ ವಿದ್ಯುತ್ ಸಂಪರ್ಕ ಇಲ್ಲದಾಗಿದೆ. ಹೀಗಾಗಿ ಸಿಸಿಟಿವಿ ಕ್ಯಾಮೆರಾ ದಾಖಲೆಗಳಿಲ್ಲ.

‘ಫಲಕವೂ ಇಲ್ಲ’

‘ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇಂದಿರಾ ಕ್ಯಾಂಟೀನ್ ಇದ್ದರೂ ಸಹ ಇಲ್ಲೊಂದು ಇಂದಿರಾ ಕ್ಯಾಂಟೀನ್ ಇದೆ ಎಂಬುದಕ್ಕೆ ಒಂದೇ ಒಂದು ನಾಮಫಲಕ ಹಾಕಿಲ್ಲ’ ಎಂದು ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ಹೇಳುತ್ತಾರೆ. ‘ಇದರ ಎದುರಿನಲ್ಲಿಯೇ ನಮ್ಮ ಮನೆ ಇದೆ. ರಾತ್ರಿಯಂತೂ ಯಾರೂ ಬಂದು ಊಟ ಮಾಡುವುದನ್ನು ನೋಡಿಲ್ಲ. ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟಕ್ಕೂ ಸರಿಯಾಗಿ ಜನ ಬರುತ್ತಿಲ್ಲ. ಬಂದ ಕೆಲವರು ಊಟ ಖಾಲಿ ಆಗಿದೆ ಎಂದು ಹೇಳಿ ವಾಪಸ್‌ ಹೋಗುವುದನ್ನು ಕಂಡಿದ್ದೇನೆ. ಇದರಲ್ಲಿ ಭಾರಿ ಪ್ರಮಾಣದ ಹಣ ದುರುಪಯೋಗ ಆಗುತ್ತಿದೆ’ ಎಂದು ಹೇಳುತ್ತಾರೆ.

ದಾಸ್ತಾನು ಇಟ್ಟರೆ ಹಾಳಾಗುತ್ತದೆ ಎಂದು ಆಗಾಗ ತಂದು ಆಹಾರ ತಯಾರಿಸುತ್ತೇವೆ. ಪುರಸಭೆಯಿಂದ ನೀರಿನ ಸಂಪರ್ಕ ಕಲ್ಪಿಸಿಲ್ಲ. ವಿದ್ಯುತ್ ಬಿಲ್‌ ಕಟ್ಟಿರಲಿಲ್ಲ. ಈ ದಿನವೇ ಬಾಕಿ ಕಟ್ಟುತ್ತೇವೆ.
ರಮೇಶ್‌, ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರ ಕಂಪನಿಯ ಜಿಲ್ಲಾ ವ್ಯವಸ್ಥಾಪಕ
ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈಗಾಗಲೇ ಅವರಿಗೆ ನಾಲ್ಕು ನೋಟಿಸ್ ನೀಡಲಾಗಿದೆ. ಸರಿಯಾಗಿ ಸ್ಪಂದಿಸುತ್ತಿಲ್ಲ. ಅಕ್ಟೋಬರ್ ಲೆಕ್ಕವನ್ನು ಇನ್ನೂ ನೀಡಿಲ್ಲ.
ರಮೇಶ್‌, ಪುರಸಭಾ ಮುಖ್ಯಾಧಿಕಾರಿ
ರಾತ್ರಿ ಬಂದು ಊಟ ಮಾಡಿದವರನ್ನು ನಾನು ನೋಡಿಯೇ ಇಲ್ಲ. ಒಳ್ಳೆಯ ಯೋಜನೆಯ ಹೆಸರಿನಲ್ಲಿ ಸುಳ್ಳು ಲೆಕ್ಕ ನೀಡಿ ಸರ್ಕಾರದ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಅಣ್ಣಪ್ಪ, ಪುರಸಭಾ ಸದಸ್ಯ
ರಾತ್ರಿ ವೇಳೆ ಇಂದಿರಾ ಕ್ಯಾಂಟೀನ್‌ನಲ್ಲಿ ಯಾವುದೇ ದಾಸ್ತಾನು ಇರಲಿಲ್ಲ.
ಇಂದಿರಾ ಕ್ಯಾಂಟೀನ್‌ನಲ್ಲಿದ್ದ ಕೊಳೆತಿರುವ ತರಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.