ಬೇಲೂರು: ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಎಂ. ದಿನೇಶ್ ಅವರು 5 ಮತಗಳ ಅಂತರದಿಂದ ಆಯ್ಕೆಯಾಗಿದ್ದು, ಉಪಾಧ್ಯಕ್ಷೆಯಾಗಿ ತೀರ್ಥಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 15 ಸದಸ್ಯ ಬಲದ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಚ್.ಎಂ ದಿನೇಶ್ ಮತ್ತು ಎಸ್.ಎಚ್. ರಾಜಶೇಖರ್ (ಗ್ರಾನೈಟ್ ರಾಜಶೇಖರ್) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀರ್ಥಕುಮಾರ್ ನಾಮಪತ್ರ ಸಲ್ಲಿಸಿದ್ದರು.
ಎಚ್.ಎಂ. ದಿನೇಶ್ 10 ಮತಗಳನ್ನು ಪಡೆದರೆ, ಎಸ್.ಎಚ್. ರಾಜಶೇಖರ್ 5 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ತೀರ್ಥಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಮಂಜುನಾಥ್ ಘೋಷಿಸಿದರು.
ಬ್ಯಾಂಕಿನ ನೂತನ ಅಧ್ಯಕ್ಷ ಎಚ್.ಎಂ. ದಿನೇಶ್ ಮಾತನಾಡಿ, ಪಿಎಲ್‌ಡಿ ಬ್ಯಾಂಕ್ ಮೂಲಕ ಸರ್ಕಾರದಿಂದ ರೈತರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಿ, ರೈತ ಪರವಾದ ಕೆಲಸ ಮಾಡುವ ಮೂಲಕ ಎಲ್ಲರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.
ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜ್ ಮಾತನಾಡಿ, ಜೆಡಿಎಸ್ ಪಕ್ಷ ಬೇಲೂರು ತಾಲ್ಲೂಕಿನಲ್ಲಿ ಸದೃಢವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಭದ್ರಕೋಟೆಯಾಗಿರುವ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಎಲ್ಲ ಚುನಾವಣೆಗಳನ್ನು ಗೆಲ್ಲುತ್ತೇವೆ ಎಂದರು.
ಆಡಳಿತ ಮಂಡಳಿಯ ನಿರ್ದೇಶಕರಾದ ಎಚ್.ವಿ. ಶಿವಶಂಕರ್, ಕಾತ್ಯಾಯಿನಿ, ಮುಗಪ್ಪಗೌಡ, ನಿಂಗರಾಜು, ಹಿರಿಯಣ್ಣಗೌಡ, ವಸಂತ್ ಕುಮಾರ್, ಎಸ್.ಎ. ರಮೇಶ್, ಗಂಗಮ್ಮ, ಜಯಶಂಕರ್, ಧನಂಜಯಮೂರ್ತಿ, ಎಸ್.ಎಸ್. ರಾಜಶೇಖರ್, ನಾಮ ನಿರ್ದೇಶಿತ ಸದಸ್ಯ ಶ್ರೀನಿವಾಸ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್, ಜೆಡಿಎಸ್ ಮುಖಂಡರಾದ ಬಲ್ಲೇನಹಳ್ಳಿ ರವಿಕುಮಾರ್, ಅಶ್ವತ್ ಬಾಣಸವಳ್ಳಿ, ಸಿ.ಎಚ್. ಮಹೇಶ್, ನಾಗೇಶ್, ಪ್ರಸಾದ್, ಸಿ.ಎಂ. ಪೃಥ್ವಿ, ಮಹೇಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.