ಸಹಕಾರ ಸಚಿವ ಕೆ.ಎನ್. ರಾಜಣ್ಣ
-ಪ್ರಜಾವಾಣಿ ಚಿತ್ರ
ಹಾಸನ: ‘ರಾಜ್ಯ ರಾಜಕೀಯ ಬದಲಾವಣೆ ಬಗ್ಗೆ ಸೆಪ್ಟೆಂಬರ್‌ನಲ್ಲಿ ಹೇಳುವುದಾಗಿ ತಿಳಿಸಿದ್ದೇನೆ. ಈಗಿನ್ನೂ ಜುಲೈನಲ್ಲಿದ್ದೇವೆ, ಅದೆಲ್ಲಾ ಈಗಲೇ ಹೇಳಿಬಿಟ್ಟರೆ ನಿಮಗೆ ಆಸಕ್ತಿ ಹೋಗುತ್ತದೆ. ಇನ್ನೂ ಎರಡು ತಿಂಗಳಿದೆ. ಅಲ್ಲಿವರೆಗೆ ದೇಶವನ್ನೇ ತಲೆಕೆಳಗೆ ಮಾಡಬಹುದು ಬನ್ನಿ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕಾರಣಕ್ಕೆ ಏಕೆ ತಲೆ ಕಡೆಸಿಕೊಳ್ಳುತ್ತೀರಾ? ಜನಗಳಿಗೆ ಒಳ್ಳೆಯದಾಗುವುದಿದ್ದರೆ ಕೇಳಿ’ ಎಂದರು.
‘ಸಿಎಂ ಸೀಟ್ ಖಾಲಿ ಇದೆಯಾ? ಐದು ವರ್ಷ ನಾನೇ ಸಿಎಂ ಎಂದು ಹೇಳಿದ್ದಾರಲ್ಲ’ ಎಂದು ಕೇಳಿದ ಅವರು, ‘ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂದೇನೂ ನನಗೆ ಅನಿಸುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತಾರೆ’ ಎಂದರು.
‘ಸುರ್ಜೇವಾಲಾ ಮೊದಲನೇ ಬಾರಿ ಬಂದು ಏನು ಮಾಡಿದರೋ, 2ನೇ ಬಾರಿಗೂ ಅದನ್ನೇ ಮಾಡೋದು. ಅವರು ನಮ್ಮ ಉಸ್ತುವಾರಿ. ಎಐಸಿಸಿಯಿಂದ ಕರ್ನಾಟಕಕ್ಕೆ ನೇಮಿಸಿದ್ದಾರೆ. ನಮ್ಮಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯುತ್ತದೆಯೋ ಅದನ್ನು ಹತ್ತಿರದಿಂದ ಗಮನಿಸಿ ಕೇಂದ್ರಕ್ಕೆ ವರದಿ ಕೊಡುತ್ತಾರೆ’ ಎಂದು ಹೇಳಿದರು.
ವೋಟ್ ಕ್ರಿಯೆಟ್ ಮಾಡಿಕೊಟ್ಟೆ: ಶಾಸಕ ಸಿ.ಎನ್. ಬಾಲಕೃಷ್ಣ ಅವರೊಂದಿಗೆ ಮಾತನಾಡುವಾಗ, ಮೈಸೂರಿನ ಎಂಡಿಸಿಸಿಸಿ ಬ್ಯಾಂಕ್ ಚುನಾವಣೆಗೆ ಮಾಡಿದ ತಂತ್ರವನ್ನು ಹಂಚಿಕೊಂಡರು. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ಮೈಸೂರಿನ ಆ ಚುನಾವಣೆ ಬಗ್ಗೆ ಮುಖ್ಯಮಂತ್ತಿ ವೈಯಕ್ತಿಕ ಆಸಕ್ತಿ ಹೊಂದಿದ್ದರು. ಆದರೆ, ಅವರಿಗೆ ಸಹಕಾರ ಸಂಘಗಳ ಬಗ್ಗೆ ಗೊತ್ತಿರಲಿಲ್ಲ. ನಾನು 38 ಸೊಸೈಟಿ ಹೊಸದಾಗಿ ನೋಂದಣಿ ಮಾಡಿಕೊಟ್ಟಿದ್ದೆ. ಅವುಗಳಿಗೆ ಮತದಾನ ಮಾಡುವ ಹಕ್ಕು ಇರಲಿಲ್ಲ. ಎಲ್ಲರಿಗೂ ಮತದಾನದ ಹಕ್ಕು ಕೊಟ್ಟೆ. ಒಂದೊಂದು ತಾಲ್ಲೂಕಿನಲ್ಲಿ ಐದಾರು ಹೆಚ್ಚುವರಿ ವೋಟ್ ಕ್ರಿಯೇಟ್ ಮಾಡಿಕೊಟ್ಟೆ. ಹೀಗಾಗಿ, ನಮ್ಮವರು ಅಲ್ಲಿ ಗೆದ್ದಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.