ADVERTISEMENT

ಎರಡೂವರೆ ಎಕರೆಯಲ್ಲಿ ₹40 ಲಕ್ಷ ಆದಾಯ: ಗಂಜಿಗೆರೆಯ ಅಶೋಕ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:52 IST
Last Updated 8 ಡಿಸೆಂಬರ್ 2025, 5:52 IST
ದಾಳಿಂಬೆ ತೋಟದಲ್ಲಿ ರೈತ ಅಶೋಕ್‌.
ದಾಳಿಂಬೆ ತೋಟದಲ್ಲಿ ರೈತ ಅಶೋಕ್‌.   

ಅರಸೀಕೆರೆ: ಕೃಷಿ ಎಂದರೆ ಮೂಗು ಮೂರಿಯುವ ಇತ್ತೀಚಿನ ದಿನಗಳಲ್ಲಿ ಬಾಣಾವರ ಹೋಬಳಿಯ ಗಂಜಿಗೆರೆಯ ರೈತರೊಬ್ಬರು, ಇರುವ ಸ್ವಲ್ಪ ಜಮೀನನಲ್ಲಿಯೇ ದಾಳಿಂಬೆ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ. ಈ ಮೂಲಕ ಸುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಗಂಜಿಗೆರೆಯ ಜಿ.ಜಿ.ಅಶೋಕ್‌ ಅವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡು ದಾಳಿಂಬೆ ಬೆಳೆದಿದ್ದು, ವಾರ್ಷಿಕ ಸರಾಸರಿ ₹30ಲಕ್ಷದಿಂದ ₹40 ಲಕ್ಷ ಆದಾಯ ಗಳಿಸಿದ್ದಾರೆ. ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡಲ್ಲದೆ. ಅಧಿಕ ಲಾಭ ಗಳಿಸುವ ಮೂಲಕ ಇತರ ರೈತರು ದಾಳಿಂಬೆ ಬೆಳೆಯತ್ತ ನೋಡುವಂತೆ ಮಾಡಿದ್ದಾರೆ.

4 ವರ್ಷದಿಂದ ದಾಳಿಂಬೆ ಬೆಳೆಯುತ್ತಿರುವ ಅಶೋಕ್‌ ಅವರಿಗೆ ಇದು 4ನೇ ಬೆಳೆ. ವೈಜ್ಞಾನಿಕ ವಿದಾನದಿಂದ ದಾಳಿಂಬೆ ಬೆಳೆದು, 46 ಟನ್‌ ಇಳುವರಿ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚು ಬರುತ್ತಿದೆ. 2 ವರ್ಷಗಳ ಹಿಂದೆ ₹ 20 ಲಕ್ಷದಿಂದ ₹ 30 ಲಕ್ಷ ಆದಾಯ ಬರುತ್ತಿತ್ತು. ಈ ಬಾರಿ ₹ 40 ಲಕ್ಷಕ್ಕಿಂತ ಹೆಚ್ಚು ಆದಾಯ ಬಂದಿದೆ.

ADVERTISEMENT

ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 100 ರಿಂದ ₹ 125 ದರವಿದ್ದು, ಬೆಂಗಳೂರು ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಸಾಗಿಸುತ್ತಿದ್ದಾರೆ. ಇದರಿಂದ ಉತ್ತಮ ಬೆಲೆ ಸಿಗುತ್ತಿದ್ದು, ಜೀವನ ತೃಪ್ತಿಕರವಾಗಿ ಸಾಗುತ್ತಿದೆ. ಇದನ್ನು ನೋಡಿದ ಇತರ ರೈತರು, ದಾಳಿಂಬೆ ಬೆಳೆಯ ಕುರಿತು ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ.

 ‘ಯುವಕರು ಉದ್ಯೋಗಕ್ಕಾಗಿ ಬೆಂಗಳೂರು ನಗರ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಾರೆ. ಆದರೆ ಇವರು ಸ್ಥಳದಲ್ಲಿ ಉತ್ತಮ ವಾತಾವರಣದೊಂದಿಗೆ ಕುಟುಂಬದವರ ಸಹಕಾರದಿಂದ ದಾಳಿಂಬೆ ಬೆಳೆಯುವುದರ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಯುವಕರು ಕೃಷಿಯಲ್ಲೂ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬಹುದು’ ಎಂದು ಅಶೋಕ್‌ ಹೇಳುತ್ತಾರೆ.

ದಾಳಿಂಬೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ದಾಳಿಂಬೆ ರಸದಲ್ಲಿ ಫಿನಾಲಿಕ್‌ ಅಂಶವು ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದರಿಂದ ಜನರು ಇದನ್ನು ಇಷ್ಟಪಡುತ್ತಾರೆ. ದಾಳಿಂಬೆ ಸಿಪ್ಪೆಯಲ್ಲಿ ಹೆಚ್ಚಿನ ಫಿನಾಲಿಕ್‌ ಅಂಶವಿದ್ದು, ಇದು ಆಹಾರ ಸಂರಕ್ಷಕಗಳಲ್ಲಿ ಹೆಚ್ಚಾಗಿ ಬಳಕೆ ಆಗುತ್ತಿದೆ.

‘ಈ ದಾಳಿಂಬೆ ಬೆಳೆಯುವ ವಿಧಾನದ ಬಗ್ಗೆ ಗೊತ್ತಿತ್ತು. ಆದರೆ, ಉತ್ತಮ ಇಳುವರಿ ಹಾಗೂ ಗುಣಮಟ್ಟ ಕಾಪಾಡುಕೊಳ್ಳುವಲ್ಲಿ ಸಮರ್ಥ್‌ ರೈತ ಮಿತ್ರ ಆಗ್ರೋ ಏಜೆನ್ಸಿಯವರು ಸಲಹೆ ಸಹಕಾರ ನೀಡಿದ್ದಾರೆ’ ಎಂದು ರೈತ ಅಶೋಕ್‌ ಹೇಳುತ್ತಾರೆ.

ಸೀಮಾ
ಅಕ್ಷಯ್‌
ದಾಳಿಂಬೆ ಲಾಭದಾಯಕ. ವೈಜ್ಞಾನಿಕ ಪದ್ದತಿ ಅನುಸರಿಸಿಕೊಂಡು ಹವಾಮಾನಕ್ಕೆ ತಕ್ಕಂತೆ ತಜ್ಞರ ಸಲಹೆಯಂತೆ ಔಷಧಿ ಸಿಂಪಡಿಸಬೇಕು. ಇದರಿಂದ ಇಳುವರಿ ಹೆಚ್ಚುವುದರ ಜೊತೆಗೆ ಗುಣಮಟ್ಟದ ಹಣ್ಣು ಬೆಳೆಯಬಹುದು.
ಸೀಮಾ ತೋಟಗಾರಿಕ ಇಲಾಖೆ ಅಧಿಕಾರಿ
ದಾಳಿಂಬೆಗೆ ಅತಿಯಾದ ನೀರಿನ ಅವಶ್ಯಕತೆ ಇಲ್ಲ. ಲಾಭದಾಯಕವಾಗಿದ್ದು ತಜ್ಞರ ಸಲಹೆಯೊಂದಿಗೆ ವೈಜ್ಞಾನಿಕ ಪದ್ದತಿ ಅನುಸರಿಸಿದರೆ ಗುಣಮಟ್ಟದ ಉತ್ತಮ ಇಳುವರಿ ಪಡೆಯಬಹುದು.
ಅಕ್ಷಯ್‌ ಸಮರ್ಥ್‌ ರೈತ ಮಿತ್ರ ಆಗ್ರೋ ಏಜೆನ್ಸಿ ಮಾಲೀಕ

‘ವರ್ತಕ ಕೃಷಿಯಲ್ಲೂ ಯಶಸ್ಸು’ ‘ರೈತ ಅಶೋಕ್‌ ವರ್ತಕರಾಗಿದ್ದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದಾಳಿಂಬೆ ತಜ್ಞರು ಹಾಗೂ ಉತ್ತಮ ಏಜೆನ್ಸಿಯವರನ್ನು ತೋಟಕ್ಕೆ ಕರೆಯಿಸಿ ಅವರಿಂದ ಸಲಹೆ ಹಾಗೂ ಮಾರ್ಗದರ್ಶನದಿಂದ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಇರುವ ಜಮೀನಿನಲ್ಲಿ ತರಕಾರಿ ಹಣ್ಣುಗಳನ್ನು ಬೆಳೆಯುತ್ತಿದ್ದು ಅದರಲ್ಲೂ ಆದಾಯ ಗಳಿಸುತ್ತಿದ್ದಾರೆ. ಸದಾ ಚಟುವಟಿಕೆಯಿಂದ ಕೃಷಿಯಲ್ಲಿ ಬಿಡುವಿಲ್ಲದಂತೆ ಒಂದಿಲ್ಲೊಂದು ಪ್ರಯತ್ನ ಮಾಡುತ್ತಿರುವ ಅಶೋಕ್‌ ಯಶಸ್ವಿ ರೈತರಾಗಿ ಹೊರಹೊಮ್ಮಿದ್ದಾರೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯವರು. ವಾತಾವರಣಕ್ಕೆ ಅನುಗುಣವಾಗಿ ತಜ್ಞರ ಸಲಹೆಯಂತೆ ರೋಗ ನಿರೋಧಕ ಔಷಧಿಗಳ ಸಿಂಪಡನೆಯಿಂದಾಗಿ ದಾಳಿಂಬೆ ಇಳುವರಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಈ ರೈತ ಸಾಧಿಸಿ ತೋರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.