ADVERTISEMENT

ಪ್ರಜ್ವಲ್ ಇನ್ನೊಂದು ತಿಂಗಳಲ್ಲಿ ಹೊರಗೆ ಬರುತ್ತಾರೆ: ಸೂರಜ್ ರೇವಣ್ಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 13:31 IST
Last Updated 9 ಮಾರ್ಚ್ 2025, 13:31 IST
ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಕಟ್ಟೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್ ರೇವಣ್ಣ ಕ್ರಿಕೇಟ್ ಪಂದ್ಯಾವಳಿ ಉದ್ಘಾಟಿಸಿ, ಮಾತನಾಡಿದರು.
ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಕಟ್ಟೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್ ರೇವಣ್ಣ ಕ್ರಿಕೇಟ್ ಪಂದ್ಯಾವಳಿ ಉದ್ಘಾಟಿಸಿ, ಮಾತನಾಡಿದರು.   

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಇನ್ನೊಂದು ತಿಂಗಳಲ್ಲಿ ಹೊರಗೆ ಬರುತ್ತಾರೆ ಎಂದು ಆಶಿಸುತ್ತಿದ್ದೇವೆ’ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.

ತಾಲ್ಲೂಕಿನ ಚಾಕೇನಹಳ್ಳಿಕಟ್ಟೆಯಲ್ಲಿ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ,‘ಪ್ರಜ್ವಲ್ ರೇವಣ್ಣ ಇನ್ನೊಂದು ತಿಂಗಳಲ್ಲಿ ಹೊರಗೆ ಬರುತ್ತಾರೆ ಎಂದು ಆಶಿಸುತ್ತಿದ್ದೇವೆ. ಎಲ್ಲರೂ ಒಟ್ಟಿಗೆ ಸ್ವಾಗತಿಸೋಣ. ಅಧಿಕಾರ ನಿಂತ ನೀರಲ್ಲ. ಜೆಡಿಎಸ್‌ಗೆ ಮತ್ತೆ ಅಧಿಕಾರ ಸಿಕ್ಕೇ ಸಿಗುತ್ತದೆ. ಜನರಿಗೆ ಯಾರು ಹೆಚ್ಚು ಅನುಕೂಲ ಕಲ್ಪಿಸುತ್ತಾರೆ ಎನ್ನುವ ಬಗ್ಗೆ ಜನರು ಜೆಡಿಎಸ್‌ ಆಡಳಿತದ ಪರ ಮತ್ತೆ ಮಾತನಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಎಚ್‌.ಡಿ.ರೇವಣ್ಣ ಸಚಿವರಾಗಿದ್ದಾಗ ಹಾಗೂ ಶಾಸಕರಿರುವಾಗಲೂ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾಲ್ಲೂಕಿಗೆ ಮತ್ತು ಜಿಲ್ಲೆಗೆ ನೀಡಿದ ಕೊಡುಗೆ ಬಗ್ಗೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ’ಎಂದರು.

ADVERTISEMENT

‘ನಾಲ್ಕೈದು ತಿಂಗಳಲ್ಲಿ ಸರ್ಕಾರ ಬದಲಾವಣೆ ಆಯ್ತು ಅನ್ಕಳ್ಳಿ, ಆಗ ಜನರು ಬಂದು ಎಚ್.ಡಿ.ರೇವಣ್ಣಗೆ ಜೈ ಅಂತಾರೆ, ಇದೇ ನಮ್ಮ ತಾಲ್ಲೂಕಿನ ಕಥೆ. ರೇವಣ್ಣ ಎಲ್ಲಾ ಗ್ರಾಮಗಳಿಗೂ ರಸ್ತೆ ಮಾಡಿಸಿದ್ರು, ಏನೂ ಕೆಲಸ ಮಾಡದೇ ಹಳ್ಳಿಗಳಲ್ಲಿ ಕೈ ಬೀಸ್ಕೊಂಡು ಬಂದು ಹೋಗುವವರೂ ಇದ್ದಾರೆ. ಆದ್ದರಿಂದ ನೀವು ನಮ್ಮ ಗ್ರಾಮಕ್ಕೆ ಯಾರು ಹಿತ, ಯಾರು ಅಹಿತ ಅಂತಾ ಯೋಚನೆ ಮಾಡಿ. ನಿಮ್ಮ ಗ್ರಾಮಕ್ಕೆ ಶಾಶ್ವತವಾಗಿ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ನಾವು ದಿನ ಬೆಳಿಗ್ಗೆ ನಿಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಯುವಕರು ಎಲ್ಲರೂ ಒಟ್ಟಿಗೆ ಒಗ್ಗಟ್ಟಾಗಿ ಒಂದು ಕಡೆ ಇರಬೇಕು’ ಎಂದು ಸಲಹೆ ನೀಡಿದರು.  ‘ಇವತ್ತಿಗೆ ಪ್ರಪಂಚ ಮುಗಿದು ಹೋಗಿಲ್ಲ, ಮುಂದಕ್ಕೂ ರಾಜಕೀಯ ಏನೂ ಅನ್ನೋದು ನನಗೆ ಗೊತ್ತಿದೆ’ ಎಂದು ಮಂದಹಾಸ ಬೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.