
ಕೆ.ಎಸ್.ಲಿಂಗೇಶ್
ಹಾಸನ: ಪ್ರೀತಂ ಗೌಡ ಮೈತ್ರಿಯ ಬಗ್ಗೆ ಅಪಸ್ವರ ಎತ್ತದಿರಲಿ. ಹೈಕಮಾಂಡ್ ನಿರ್ದೇಶನದಂತೆ ಮೈತ್ರಿ ನಡೆಯಲಿದ್ದು, ಲಂಗು ಲಗಾಮು ಇಲ್ಲದೇ ಮಾತನಾಡುವುದನ್ನು ನಿಲ್ಲಿಸಲಿ. ಮೈತ್ರಿಗೆ ಗೌರವ ಕೊಡಲಿ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೆಡಿಎಸ್ ಸದೃಢವಾಗಿದ್ದು, ಇದನ್ನು ಕಳೆದ ಸಮಾವೇಶದಲ್ಲಿಯೇ ಸಾಬೀತು ಮಾಡಿದ್ದೇವೆ. ಮುಂದಿನ 2028ರ ವಿಧಾನಸಭೆ ಚುನಾವಣೆ ಬಳಿಕ ನಿಜವಾಗಿಯೂ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಜೆಡಿಎಸ್–ಬಿಜೆಪಿ ಮೈತ್ರಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇರುವ ಆತಂಕ ಕಾಡುತ್ತಿರುವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್–ಬಿಜೆಪಿ ಮೈತ್ರಿ ಇದ್ದಾಗಲೂ ಲೋಕಸಭಾ ಚುನಾವಣೆಯಲ್ಲಿ ಪ್ರೀತಂಗೌಡರು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆ. ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ. ಮೈತ್ರಿಯಿಂದ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ನಿಂದಲೇ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಗೆ ₹500 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ತಂದಿರುವುದನ್ನು ಸ್ವಾಗತಿಸಿದ ಅವರು, ಇದರ ಲಾಭ ಹಾಸನಕ್ಕೂ ದೊರೆಯಲಿದೆ. ಇದೇ ರೀತಿಯಲ್ಲಿ ಜಿಲ್ಲೆಯಲ್ಲೂ ಬೃಹತ್ ಕೈಗಾರಿಕೆ ತರಲು ಮನವಿ ಮಾಡಲಾಗಿದೆ ಎಂದರು.
ದುದ್ದ ಹಾಗೂ ಮೊಸಳೆ ಹೊಸಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆಗೆ ತಲಾ ₹150 ಕೋಟಿ ತಂದಿದ್ದು, ಇದಕ್ಕೆ ಸಹಕಾರ ನೀಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಜಿಲ್ಲೆಯ ಆನೆ ಸಮಸ್ಯೆ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ. ಹಾಸನದ ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಕ್ರಿಯವಾಗಿ ಪೋಸ್ಟ್ ಹಾಕುವುದನ್ನು ಬಿಟ್ಟು, ಹಾಸನದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಮೈತ್ರಿ ಮಾಡಿಕೊಳ್ಳಲು ನಾವು ಮುಲಾಜಿಗೆ ಹೋಗಿಲ್ಲ. ಎಚ್.ಡಿ. ದೇವೇಗೌಡ ಹಾಗೂ ಪ್ರಧಾನಿ ಮೋದಿ ಅವರ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಪ್ರೀತಂಗೌಡರು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಾತ್ರ, ಹೈಕಮಾಂಡ್ ಅಲ್ಲ. ಅವರ ಮಾತಿನಿಂದ ಎಲ್ಲವೂ ನಡೆಯುವುದಿಲ್ಲ. ಸಮಯ ಬಂದಾಗ ನಮ್ಮ ಶಕ್ತಿಯನ್ನು ಪ್ರದರ್ಶಿಸುತ್ತೇವೆ ಎಂದು ತಿರುಗೇಟು ನೀಡಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಮಾಧ್ಯಮ ವಕ್ತಾರ ರಘು ಹೊಂಗೆರೆ, ರಂಗಶೆಟ್ಟಿ, ಸಮೀರ್ ಅಹಮದ್ ಸೇರಿದಂತೆ ಇತರರು ಇದ್ದರು.
----
ಹಾಸನದಲ್ಲಿ ಬಿಜೆಪಿ ಹೈಕಮಾಂಡ್ ಪ್ರೀತಂ ಗೌಡರೇ? ಅವರಿಗೆ ಯಾವುದೇ ನಿಯಂತ್ರಣ ಇಲ್ಲವೇ? ಪಕ್ಷದ ನಿರ್ಧಾರಗಳನ್ನು ವೈಯಕ್ತಿಕವಾಗಿ ಪ್ರಶ್ನಿಸುವುದು ಸರಿಯಲ್ಲ
-ಕೆ.ಎಸ್. ಲಿಂಗೇಶ್ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ
---
ಶಾಸಕರು ಸದನ ಗೌರವ ಕಾಪಾಡಬೇಕು
ಒಬ್ಬ ಶಾಸಕರಾಗಿ ಶಿವಲಿಂಗೇಗೌಡರು ಸದನದ ಗೌರವ ಕಾಪಾಡಬೇಕು. ಶಾಸಕ ಶರಣು ಸಲಗರ ಅವರ ಪತ್ನಿ ಕುರಿತು ಸದನದಲ್ಲಿ ಮಾತನಾಡಿರುವುದು ಖಂಡನೀಯ ಎಂದು ಕೆ.ಎಸ್. ಲಿಂಗೇಶ್ ಹೇಳಿದರು. ಸಲಗರ ಅವರ ಪತ್ನಿ ಕೆಎಎಸ್ ಪರೀಕ್ಷೆ ಬರೆದು ತಹಶೀಲ್ದಾರ್ ಆಗಿದ್ದಾರೆ. ಶಿವಲಿಂಗೇಗೌಡರು ಪತ್ನಿಯ ಹೆಸರಿನಲ್ಲಿ ಜಲ್ಲಿ ಕ್ರಷರ್ ನಡೆಸುತ್ತಿಲ್ಲವೇ? ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಪರಾಮರ್ಶೆ ಮಾಡಬೇಕು ಎಂದು ಹೇಳಿದರು. ಅರಸೀಕೆರೆ ಕ್ಷೇತ್ರದಲ್ಲಿ ದೇವೇಗೌಡರ ವರ್ಚಸ್ಸು ಇರಲಿಲ್ಲ. ಚುನಾವಣೆಗಳಲ್ಲಿ ಕೇವಲ ಒಂಬತ್ತು ಸಾವಿರ ಮತಗಳು ಬರುತ್ತಿದ್ದವು ಎಂಬ ಶಿವಲಿಂಗೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಶಿವಲಿಂಗೇಗೌಡರು ಶಾಸಕರಾಗುವುದಕ್ಕೂ ಮುನ್ನ ಜೆಡಿಎಸ್‌ನಿಂದ ಪರಮೇಶ್ ಗಂಗಾಧರಪ್ಪ ಸೇರಿದಂತೆ ಹಲವು ಮಂದಿ ಗೆದ್ದಿದ್ದಾರೆ. ಬದ್ಧತೆ ಇಲ್ಲದೇ ಮಂತ್ರಿಗಿರಿಯ ಆಸೆಗಾಗಿ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಿದ್ದಾರೆ ಎಂದು ಟೀಕಿಸಿದರು. ಸಭಾಧ್ಯಕ್ಷರ ನಡವಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಎಚ್.ಕೆ. ಕುಮಾರಸ್ವಾಮಿ ವಿಶೇಷ ಅಧಿವೇಶನದ ವೇಳೆ ಶಿವಲಿಂಗೇಗೌಡರು ವಿರೋಧ ಪಕ್ಷದ ನಾಯಕರ ವಿರುದ್ಧ ಮಾತನಾಡುವಾಗ ಸಭಾಧ್ಯಕ್ಷರು ನಗುತ್ತಾ ಕುಳಿತಿದ್ದ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.