ADVERTISEMENT

ಅಕಾಲಿಕ ಮಳೆ: ನೆಲ ಕಚ್ಚಿದ ರಾಗಿ; ಸಂಕಷ್ಟದಲ್ಲಿ ಬೆಳೆಗಾರರು

ಹಲವೆಡೆ ಫಸಲು ಮಣ್ಣು ಪಾಲು

ಕೆ.ಎಸ್.ಸುನಿಲ್
Published 13 ನವೆಂಬರ್ 2021, 15:57 IST
Last Updated 13 ನವೆಂಬರ್ 2021, 15:57 IST
ಹೆತ್ತೂರು ಹೋಬಳಿ ಐಗೂರು ಗ್ರಾಮದಲ್ಲಿ ಕಾಫಿ ಹಣ್ಣುಗಳು ಉದುರಿ ಬಿದ್ದಿವೆ. 
ಹೆತ್ತೂರು ಹೋಬಳಿ ಐಗೂರು ಗ್ರಾಮದಲ್ಲಿ ಕಾಫಿ ಹಣ್ಣುಗಳು ಉದುರಿ ಬಿದ್ದಿವೆ.    

ಹಾಸನ: ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ, ಜೋಳ, ಭತ್ತ, ಕಾಫಿ ಫಸಲಿಗೆ ಹಾನಿಯಾಗಿದ್ದು,ಸಾಲ ಮಾಡಿ ಬೆಳೆದಿದ್ದ ಬೆಳೆಗಳೆಲ್ಲ ನಷ್ಟವಾಗಿದೆ.

ಚನ್ನರಾಯಪಟ್ಟಣ, ಹಿರೀಸಾವೆ, ಹೊಳೆನರಸೀಪುರ, ಅರಕಲಗೂಡು, ಅರಸೀಕೆರೆ ತಾಲ್ಲೂಕುಗಳಲ್ಲಿ ರಾಗಿ ಮತ್ತು ಜೋಳ ಕಟಾವಿಗೆ ಬಂದಿದ್ದು, ಕೊಯ್ಲು ಸಾಧ್ಯವಾಗುತ್ತಿಲ್ಲ. ರಾಗಿ, ಜೋಳ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗುತ್ತಿದ್ದರೆ. ಮಳೆ ಬಿರುಸಿಗೆ ಹಲವೆಡೆ ರಾಗಿ ಪೈರು ನೆಲ ಕಚ್ಚಿದ್ದು ಫಸಲು ಮಣ್ಣು ಪಾಲಾಗುತ್ತಿದೆ.

ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನಲ್ಲಿ ರೋಬೊಸ್ಟಾ, ಅರೇಬಿಕಾ ಕಾಫಿ ಕೊಯ್ಲು ಮಳೆಯಿಂದ ಹಾಳಾಗುತ್ತಿವೆ. ಕಾಳು ಮೆಣಸು ಉದುರುತ್ತಿದೆ. ಮಳೆ ಮುಂದುವರಿದರೆ ಹಣ್ಣು ಸಂಪೂರ್ಣಕೊಳೆಯಲಿದೆ. ಮೋಡ ಕವಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆಯಿಂದ ಕಟಾವು ಮಾಡಿದ ಕಾಫಿಒಣಗಿಸಲು ರೈತರು ಹರಸಾಹಸ ಪಡುವಂತಾಗಿದೆ.

ADVERTISEMENT

ಆಲೂರು, ಅರಕಲಗೂಡು, ಹಾಸನ ಭಾಗದಲ್ಲಿ ಶುಂಠಿ ಬೆಳೆಯಲಾಗಿದ್ದು, ಅಧಿಕ ಮಳೆಯಿಂದ ನಾಶವಾಗಿದೆ. ಕೊಳೆ ರೋಗ ತಗುಲಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

ಮೆಕ್ಕೆಜೋಳ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ.ಜಿಲ್ಲೆಯಲ್ಲಿ ಅಂದಾಜು 90 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. 6,77,000 ಮೆಟ್ರಿಕ್‌ ಟನ್‌ ಜೋಳ ಉತ್ಪಾದನೆ ನಿರೀಕ್ಷಿಸಲಾಗಿದ್ದು, ಶೇ 60ರಷ್ಟು ಬೆಳೆ ಕಟಾವಿಗೆ ಬಂದಿದ್ದು,ಜಿಟಿ ಜಿಟಿ ಮಳೆಯಿಂದಾಗಿ ಕಟಾವು ಮಾಡಲು ಆಗುತ್ತಿಲ್ಲ. ಮಾರುಕಟ್ಟೆದರ ಕ್ವಿಂಟಲ್‌ಗೆ ₹ 1000 ರಿಂದ ₹ 1200. ನಿರಂತರಮಳೆಯಿಂದಾಗಿ ಜೋಳದಲ್ಲಿ ಫಂಗಸ್‌ ಕಾಣಿಸಿಕೊಳ್ಳುತ್ತಿದ್ದು, ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗದ ಕಾರಣ ಮಳೆ ನಿಂತರೆ ಸಾಕು ಎನ್ನುವಂತಾಗಿದೆ.

‘ಹೋಬಳಿಯಲ್ಲಿ ಎರಡು ಮೂರು ದಿನಗಳಿಂದ ಸತತವಾಗಿ ಗಾಳಿ ಮತ್ತು ತುಂತುರು ಮಳೆಯಾಗುತ್ತಿದೆ. ಕೆಲ ದಿನ ಕಳೆದಿದ್ದರೆ ರಾಗಿ ಫಸಲು ಕೊಯ್ಲಿಗೆ ಬರುತ್ತಿತ್ತು. ರಾಗಿ ಬೆಳೆ ನೆಲ ಕಚ್ಚಿರುವುದರಿಂದ ಮೇವು ಸಿಗುವುದಿಲ್ಲ. ಮೇವು ಕೊಳೆತು ದನಗಳು ತಿನ್ನಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲ, ಸೋಲ ಮಾಡಿ ಬೆಳೆದ ಬೆಳೆ ಕೈಗೆ ಸಿಗದೆ ಕೊಳೆತು ಹೋಗುತ್ತಿದೆ. ಎಕರೆಗೆ ₹ 5 ರಿಂದ ₹ 6 ಸಾವಿರ ಖರ್ಚು ಮಾಡಿದ್ದೇನೆ. ಯಂತ್ರದಲ್ಲೂ ಕೊಯ್ಲು ಆಗುವುದಿಲ್ಲ. ಮಾಡಿದ ಖರ್ಚು ಸಿಗದಂತೆ ಆಗಿದೆ’ ಎಂದು ಹಿರೀಸಾವೆ ರೈತ ಪೂರ್ಣಚಂದ್ರ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.