
ಹೆತ್ತೂರು ಗ್ರಾಮದ ಶ್ರೀರಾಮ ಬಡಾವಣೆಯ ನೂತನ ಕಾಂಕ್ರೀಟ್ ರಸ್ತೆಗೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ಮಾಡಿದರು.
ಹೆತ್ತೂರು: ಹೋಬಳಿ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಇಲ್ಲಿನ ಶ್ರೀರಾಮ ಬಡಾವಣೆಗೆ ತೆರಳುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಶಾಸಕನಾಗಿ ಎರಡು ವರ್ಷಗಳಲ್ಲಿ ಈ ಹೋಬಳಿ ವ್ಯಾಪ್ತಿಯ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಮತದಾರರು ನನಗೆ ನೀಡಿರುವ ಒಂದೊಂದು ಮತವೂ ಅತ್ಯಂತ ಮಹತ್ವದ್ದಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆಗಳಂತಹ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಲಭ್ಯವಾಗುವ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕೆಲವೇ ದಿನಗಳಲ್ಲಿ ಕರಗೂರು-ಕರಗೂರು ಕೊಪ್ಪಲು-ಹಾಡ್ಯಾ-ಹೆತ್ತೂರು ರಸ್ತೆಯನ್ನು 3 ಕಿ.ಮೀ ಯಿಂದ 8ಕಿ.ಮೀ ವರೆಗೆ ಸುಮಾರು ₹3.96 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕೆಪಿಎಸ್ ಶಾಲೆಗೆ ತೆರಳುವ ರಸ್ತೆಯನ್ನು ₹15 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವುದು ಎಂದು ಹೇಳಿದರು.
ಹಾಡ್ಗಳ್ಳಿ-ತೊಡುಮನೆ ಹಾರೆವರೆಗಿನ 1.5 ಕಿ.ಮೀ ರಸ್ತೆ, ಹಾಡ್ಲಹಳಿ, ಕಿರ್ಕಳ್ಳಿ ವರೆಗಿನ 5 ಮೀಟರ್ ಅಗಲದ ರಸ್ತೆ ಹಾಗೂ ರಾಗಿಪುರದ ಸುಮಾರು 400 ಮೀಟರ್ ರಸ್ತೆ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಅಭಿವೃದ್ದಿ ಅಧಿಕಾರಿ ರಮೇಶ್, ಸದಸ್ಯ ಉಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ನೇತ್ರಾ ಸುರೇಶ್, ನಿರ್ದೇಶಕ ಎಚ್.ಡಿ. ಪ್ರತಾಪ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೇದಮೂರ್ತಿ, ಮುಖಂಡರಾದ ಮಹೇಶ್ ಎಚ್.ಜಿ., ರಾಮಚಂದ್ರ, ಶಿವಕುಮಾರ್, ಲಿಖಿತ್, ಎಚ್.ಎನ್.ಪ್ರೇಮಕುಮಾರ್, ಮಂಜುನಾಥ ಕೊಣಬನಹಳ್ಳಿ, ಗ್ರಾಮಸ್ಥರಾದ ಪವನ್ ಎಚ್., ಬಿ.ಭಿಮೇಶ್, ತೇಜಕುಮಾರ್, ಶಿವಣ್ಣಗೌಡ, ಶರತ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.