ಬೇಲೂರು: ‘ಬಗರ್ ಹುಕುಂ ಯೋಜನೆಯಡಿ ಸಾಗುವಳಿ ಚೀಟಿ ಪಡೆದ ರೈತರಿಗೆ ಹಕ್ಕುದಾಖಲೆ ಮಾಡಿ ಕೊಡದೆ ಅನಗತ್ಯ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಸೋಮವಾರದಿಂದ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ರೈತಸಂಘ ಹಾಗೂ ಹಸಿರು ಸೇನೆಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತಸಂಘದ ಜಿಲ್ಲಾಘಟಕದ ಪ್ರದಾನಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಸಾಗುವಳಿ ಪಡೆದ 1460 ಭೂ ಮಂಜೂರಾತಿದಾರರ ಮೂಲ ದಾಖಲೆಗಳನ್ನು ತನಿಖೆ ಹೆಸರಿನಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರಿಂದ ರೈತರಿಗೆ ಅನ್ಯಾಯ, ಜೊತೆಗೆ ಮಂಜೂರಾತಿಗೆ ಒಳಪಟ್ಟ ಸರ್ವೆನಂನಲ್ಲಿ ಇತರೆ ರೈತರಿಗೂ ಪೋಡಿ ಮಾಡಿಸಿಕೊಳ್ಳಲು, ಇತರೆ ದಾಖಲಾತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಅಕ್ರಮ ಭೂ ಮಂಜೂರಾತಿ ಪಡೆದವರ ಸಾಗುವಳಿ ತನಿಖೆ ನಡೆಸಿ ವಜಾಮಾಡಿ. ಆದರೆ, ನೈಜ ರೈತರಿಗೆ ತೊಂದರೆ ಕೊಡುತ್ತಿರುವುದು ಖಂಡನೀಯ’ ಎಂದರು.
‘53, 57ರ ಅಡಿಯಲ್ಲಿ 9ಸಾವಿರ ಅರ್ಜಿಗಳು ಬಾಕಿ ಉಳಿದಿದ್ದರೂ ಶಾಸಕರು ಸರ್ಮಪಕವಾಗಿ ಅರ್ಜಿಗಳ ವಿಲೇವಾರಿ ಮಾಡುತ್ತಿಲ್ಲ’ ಎಂದು ಆರೋಪಿಸಿದರು.
ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ‘ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ಮೀತಿಮೀರಿದ್ದು ಶಾಶ್ವತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ರೈತರ ಜಮೀನನ್ನು ಖರೀದಿಸಿದರೆ, ರೈತರು ಬೇರೆಡೆಗೆ ಸ್ಥಳಾಂತರವಾಗುತ್ತಾರೆ’ ಎಂದರು.
‘ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ತೊಂದರೆಯಾದ ಪ್ರದೇಶಗಳನ್ನು ತಹಶೀಲ್ದಾರ್ ಬಂದು ಪರಿಶೀಲಿಸಿದರು. ಆದರೆ ಶಾಸಕರು ಬಾರದೇ ಅಸಡ್ಡೆ ತೋರಿದ್ದಾರೆ’ ಎಂದು ಆರೋಪಿಸಿದರು.
ತಾಲ್ಲೂಕು ಘಟಕದ ಪ್ರದಾನಕಾರ್ಯದರ್ಶಿ ಬಸವರಾಜು, ಹಸಿರುಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮೆಗೌಡ, ಜಿಲ್ಲಾಘಟಕದ ಉಪಾಧ್ಯಕ್ಷ ಕೆ.ಪಿ.ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.