ADVERTISEMENT

ಸಾರಿಗೆ ನೌಕರರ ಕುಟುಂಬದಿಂದ ಪ್ರತಿಭಟನೆ

45 ನೌಕರರ ವರ್ಗಾವಣೆ, ಮುಷ್ಕರದ ನಡುವೆ78 ಬಸ್‌ಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:40 IST
Last Updated 11 ಏಪ್ರಿಲ್ 2021, 13:40 IST
 ಹಾಸನ ರೈಲ್ವೆ ನಿಲ್ದಾಣದ ಎದುರು ಸಾರಿಗೆ ಸಂಸ್ಥೆ ನೌಕರರು ಹಾಗೂ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು
 ಹಾಸನ ರೈಲ್ವೆ ನಿಲ್ದಾಣದ ಎದುರು ಸಾರಿಗೆ ಸಂಸ್ಥೆ ನೌಕರರು ಹಾಗೂ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು   

ಹಾಸನ: ಸಾರಿಗೆ ಸಂಸ್ಥೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಐದನೇ ದಿನವಾದ ಭಾನುವಾರವೂ ಮುಂದುವರೆದಿದ್ದು, ಹಾಸನ ವಿಭಾಗದಿಂದ ಭಾನುವಾರ 78 ಬಸ್‌ಗಳು ಸಂಚಾರ ಆರಂಭಿಸಿವೆ.

ಸರ್ಕಾರದ ‘ವರ್ಗಾವಣೆ’ ಮತ್ತು ‘ನೋಟಿಸ್’ ಜಾರಿ ಅಸ್ತ್ರಕ್ಕೆ ಬೆದರಿರುವ ನೌಕರರು ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹಾಸನ ವಿಭಾಗದಲ್ಲಿ 45 ಮಂದಿ ನೌಕರರನ್ನು ವರ್ಗಮಾಡಲಾಗಿದ್ದು, ಸೂಚಿಸಿದ ಸ್ಥಳದಲ್ಲಿ ಭಾನುವಾರದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಅವರಿಗೆ ಕಟ್ಟುನಿಟ್ಟಿನಆದೇಶ ಮಾಡಲಾಗಿದೆ.

ನೌಕರರ ದಿಢೀರ್‌ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಅವರ ಕುಟುಂಬದವರು ಮಕ್ಕಳೊಂದಿಗೆ ಭಾನುವಾರ ನಗರದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

‘ಮನೆ ಯಾಜಮಾನರು ತರುವ ಸಂಬಳದಲ್ಲಿ ಕುಟುಂಬ ನಿರ್ವಹಣೆ ನಡೆಯಬೇಕು. ಬೆಳಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಾರೆ. ವಿಶ್ರಾಂತಿ ಇಲ್ಲದೆ ಕೆಲಸ ಮಾಡುವ ಸಾರಿಗೆ ನೌಕರರಿಗೆ ಸಂಬಳ ಕೊಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ನ್ಯಾಯಯುತವಾದ ಬೇಡಿಕೆ ಈಡೇರಿಸುವವರೆಗೂ ಕುಟುಂಬ ಸಮೇತ ಬೀದಿಗಿಳಿದು ಹೋರಾಟ ಮಾಡುವುದನ್ನು ನಿಲ್ಲಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

‘ಕೆಲ ನೌಕರರು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ನಮಗೂ ಕುಟುಂಬ ಇದೆ. ನಮ್ಮ ಜೊತೆ ಕೈಜೋಡಿಸಿ ಮುಷ್ಕರಕ್ಕೆ ಬೆಂಬಲ ಕೊಡಿ’ ಎಂದು ಮನವಿ ಮಾಡಿದರು.

ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಉಪಾಧ್ಯಕ್ಷ ಆರ್. ಆನಂದ್ ಮಾತನಾಡಿ, ‘ಸರ್ಕಾರ 9 ಬೇಡಿಕೆಗಳನ್ನು ಮೂರು ತಿಂಗಳ ಒಳಗಾಗಿ ಈಡೇರಿಸುವ ಭರವಸೆ ನೀಡಿತ್ತು. ಕಾಲಾವಕಾಶ ಮುಗಿದರೂ 6ನೇ ವೇತನ ಆಯೋಗ ಜಾರಿ ಮಾಡುವಲ್ಲಿ ವಿಫಲವಾಗಿದ್ದರಿಂದ ಮುಷ್ಕರ ಮುಂದುವರೆಸುವುದು ಅನಿವಾರ್ಯವಾಗಿದೆ’ ಎಂದರು.

ದಿನದಿಂದ ದಿನಕ್ಕೆ ಬಸ್‌ಗಳ ಸಂಚಾರ ಏರಿಕೆಯಾಗುತ್ತಿದ್ದು, 100ಕ್ಕೂ ಹೆಚ್ಚು ನಿರ್ವಾಹಕರು ಮತ್ತು ಚಾಲಕರು ಸ್ವಯಂ ಪ್ರೇರಿತವಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಸೋಮವಾರ ಮತ್ತಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ ಎಂದು ಬಸ್‌ ನಿಲ್ದಾಣ ಮೇಲ್ವಿಚಾರಕ ಮಂಜುನಾಥ್ ತಿಳಿಸಿದರು.

ಇದರ ನಡುವೆಯೇ 50 ರಿಂದ 60 ಖಾಸಗಿ ವಾಹನಗಳು ಸಂಚಾರ ನಡೆಸಿದವು. ಸರಣಿ ರಜೆಗಳು ಇರುವ ಕಾರಣ ನಗರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಭಾನುವಾರ ರಜಾ ದಿನ ಆಗಿದ್ದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರಲಿಲ್ಲ.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.